ಮಡಿಕೇರಿ: ಬಿಜೆಪಿಯ ಮುಖಂಡರಿಂದ ಮಾರಕಾಸ್ತ್ರಗಳಿಂದ ಹಲ್ಲೆ: ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಗಂಭೀರ

ಮಡಿಕೇರಿ: ಬಿಜೆಪಿಯ ಮುಖಂಡರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಪರಿಣಾಮ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಡಿಕೇರಿ ತಾಲೂಕಿನ ಅರೆಕಾಡು ಸಮೀಪದ ಟೀ ಅಂಗಡಿಯೊಂದರಲ್ಲಿ ಘಟನೆ ನಡೆದಿದ್ದು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಯಣ್ಣ ಎಂಬವರ ಸಹೋದರಿ ಲಕ್ಷ್ಮಿ ಎಂಬವರು ನಿನ್ನೆ ದಿನ ನಿಧನ ಹೊಂದಿದ್ದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯಶ್ವಂತ್ ಹಾಗೂ ಕೋಶಾಧಿಕಾರಿ ಚಂದನ್ ಅಪ್ಪಯ್ಯ ಎಂಬವರು ಮೃತರ ಅಂತಿಮ ದರ್ಶನ ಪಡೆದು ಸಮೀಪದ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಬಿಜೆಪಿ ಮುಖಂಡರಾದ ಮೂವರು ಸಹೋದರರೆನ್ನಲಾದ ಅರೆಕಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭು ಶೇಖರ್ ಹಾಗೂ ಸಹೋದರರಾದ ಅಪ್ರು ರವೀಂದ್ರ ಮತ್ತು ಆನಂದ್ ರಘು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.