ಕ್ಷೇತ್ರದ ಬಹುಕಾಲದ ಬೇಡಿಕೆಗಳು ಸಕಾರಗೊಳ್ಳುತ್ತಿದೆ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಜನರ ಬಹು ಕಾಲದ ಬೇಡಿಕೆಯಂತೆ ಪಾಣೆಮಂಗಳೂರಿನಿಂದ ನಂದಾವರ ದೇವಸ್ಥಾನಕ್ಕೆ ನೂತನ ರಸ್ತೆ ನಿರ್ಮಾಣಕ್ಕೆ 9.75 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಲಾಗುವುದು. ಹೆಚ್ಚುವರಿ ನಾಲ್ಕೈದು ಕೋಟಿ ರೂ. ಅನುದಾನವನ್ನು ಬಳಕೆ ಮಾಡಿ ಪೂರ್ಣ ಪ್ರಮಾಣದ ಅತೀ ಸಮೀಪ ಸಂಪರ್ಕ ರಸ್ತೆ ಕ್ಷೇತ್ರಕ್ಕೆ ಲಭ್ಯವಾಗಲಿದೆ. ಈ ಮೂಲಕ ಕ್ಷೇತ್ರದ ಬಹುಕಾಲದ ಬೇಡಿಕೆಗಳು ಈಡೇರುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
9.75 ಕೋಟಿ ರೂ. ವೆಚ್ಚದಲ್ಲಿ ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಭ ಕೇತ್ರಕ್ಕೆ ನೂತನ ಸೇತುವೆ ನಿರ್ಮಾಣ ಕಾಮಗಾರಿಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶಾಸಕನಾಗಿ ಆಯ್ಕೆಯಾದ ಪ್ರಾರಂಭದಲ್ಲಿ ಹಿರಿಯರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ ಅವರ ಆಶಯದಂತೆ ರಸ್ತೆ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು ಪ್ರಸಕ್ತ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ ಎಂದರು.
ನೇತ್ರಾವತಿ ನದಿಯ ಬದಿ ರಮನೀಯ ಸ್ಥಳದಲ್ಲಿ ದೇವಸ್ಥಾನ ಇರುವುದರಿಂದ ಇಲ್ಲಿಗೆ ಬರುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆ ನಿರ್ಮಾಣದಿಂದ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ಹೆಚ್ಚಳವಾಗಬೇಕು ಹಾಗೂ ಕಾಮಗಾರಿ ಯಾವುದೇ ವಿಘ್ನ ವಿಲ್ಲದೆ ಕ್ಲಪ್ತ ಸಮಯದಲ್ಲಿ ಜನರ ಉಪಯೋಗಕ್ಕೆ ಸಿಗಲಿ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಬಾಕರ್ ಭಟ್ ಮಾತನಾಡಿ, ದೇವಸ್ಥಾನ ಎಂದರೆ ಧರ್ಮದ ಸಂಪರ್ಕ ಸೇತುವೆ ಇದ್ದಂತೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಶಾಸಕ ರಾಜೇಶ್ ನೇತೃತ್ವದಲ್ಲಿ ಉತ್ತಮ ಯೋಜನೆ ರೂಪುಗೊಂಡಿದ್ದು ಅತ್ಯಂತ ಯಶಸ್ವಿಯಾಗಿ ಅನುಷ್ಠಾನ ಗೊಳ್ಳಲಿ ಎಂದರು.
ದೇವಸ್ಥಾನಕ್ಕೆ ಬರಬೇಕಾದರೆ ಸುತ್ತುಬಳಸಿ ಬರಬೇಕಾದ ಪರಿಸ್ಥಿತಿ ಇತ್ತು. ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಭಕ್ತರ ಅನುಕೂಲವಾಗುವ ರೀತಿಯಲ್ಲಿ ನೂತನ ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.
ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರು ವೈಧಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಕಿಯೋನಿಕ್ಸ್ ನಿಕಟಪೂರ್ವ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್, ನಿಕಟಪೂರ್ವ ಅಧ್ಯಕ್ಷ ಎ.ಸಿ.ಭಂಡಾರಿ ಬಂಟ್ವಾಳ ಬಿಜೆಪಿ ಮಂಡಲದ ಪ್ರಮುಖರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಊರಿನ ಪ್ರಮುಖರು ಉಪಸ್ಥಿತರಿದ್ದರು.