ಬೊಲೆರೊ ಕಾರು ಕೆಎಸ್‌ಆರ್‌ಟಿಸಿ ಬಸ್‌ಗೆ ಢಿಕ್ಕಿ: ಕಾರಿನಲ್ಲಿದ್ದ ಓರ್ವ ಸಾವು, ಐವರು ಗಂಭೀರ
ವಿಜಯಪುರ: ಬೊಲೆರೊ ಕಾರು ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಬ್ಬ ಸಾವನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಸುಕಿನ ಮೂರು ಗಂಟೆಗೆ ಕೊಲ್ಹಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಕೃಷ್ಣಾ ನದಿ ಸೇತುವೆ ಮೇಲೆ ನಡೆದಿದೆ.
ಒಡಿಸ್ಸಾ ರಾಜ್ಯದ ಸುಂದರಘರ್ ಜಿಲ್ಲೆಯ ಸಂದೀಪ್ ಶರ್ಮಾ ನಾಯಕ್ (30) ಮೃತ ವ್ಯಕ್ತಿ.
ಕಾರಿನಲಿದ್ದವರೆಲ್ಲರೂ ಒಡಿಸ್ಸಾದವರಾಗಿದ್ದಾರೆ. ಹುಬ್ಬಳ್ಳಿಯಿಂದ ವಿಜಯಪುರದತ್ತ ಹೋಗುತ್ತಿದ್ದ ಕಾರಿನ ಚಾಲಕ ನಿದ್ದೆ ಮಂಪರಿನಲ್ಲಿ ಎದುರಿಗೆ ಬರುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಕೂಡಲೇ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು ತೆರಳಿ ಗಾಯಗೊಂಡ ಐವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಮೂವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.





