ಬುರ್ಖಾ ಧರಿಸಿ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನ: ಆರೋಪಿ ಕಿಶೋರ್ ಬಂಧನ
ವಿಜಯಪುರ: ಸೋಮವಾರ ಬೆಳ್ಳಂಬೆಳಿಗ್ಗೆ ಮಹಿಳೆಯರ ವೇಷದಲ್ಲಿದ್ದ ಯುವಕ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸಿ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.
ಪೊಲೀಸ್ ವಶದಲ್ಲಿರುವ ಯುವಕ ತನ್ನ ಹೆಸರು ಕಿಶೋರ್ (22)ಹಾಸನದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.
ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕ ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಈ ವೇಳೆ ನಡೆದ ಮಾತುಕತೆಯಲ್ಲಿ ಬುರ್ಖಾ ಧರಿಸಿರುವವ ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ. ಪೊಲೀಸರು ಆತನ ಮೇಲೆ ನಿಗಾ ಇರಿಸಿದಾಗ ಕೆಲ ಸಮಯದ ಬಳಿಕ ಬುರ್ಖಾಧಾರಿ ಪಕ್ಕದ ಬೇಲಿಯತ್ತ ತೆರಳಿ ಬುರ್ಖಾ ಬದಲಿಸಿ ಯುವಕನ ವೇಷದಲ್ಲಿ ಮತ್ತೆ ಜಲಾಶಯದ ಪ್ರವೇಶ ದ್ವಾರದಲ್ಲಿ ಪತ್ತೆಯಾಗಿದ್ದಾನೆ.
ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಇತರೆ ವಸ್ತುಗಳು ಪತ್ತೆಯಾಗಿವೆ. ವಶಕ್ಕೆ ಪಡೆದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.