November 21, 2024

ಸುಳ್ಯ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ನೂರಾರು

0

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದಲ್ಲಿ ಮಳೆಗಾಲ ಬಂತೆಂದರೆ ನೂರಾರು ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ.
ಇದಕ್ಕೆ ಕಾರಣ ಮಳೆಗಾಲಕ್ಕೂ ಮುನ್ನ ಸಂಬಂಧಪಟ್ಟ ಇಲಾಖೆಯವರು ಯಾವುದೇ ರೀತಿಯ ಪೂರ್ವ ಸಿದ್ಧತೆ ಯೋಜನೆಯನ್ನು ರೂಪಿಸಿಕೊಳ್ಳದೆ ಇರುವುದಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಇರುವಂತಹ ಸಮಸ್ಯೆ ಸುಳ್ಯ ಮಾಣಿ ಮೈಸೂರು ಹೆದ್ದಾರಿಯ ಬೊಳುಬೈಲು ಸಮೀಪ ಹೆದ್ದಾರಿಯಲ್ಲಿ ಮಳೆಗಾಲದಲ್ಲಿ ನೀರು ನದಿಯಂತೆ ತುಂಬಿಕೊಂಡು ಸಮಸ್ಯೆ ಸೃಷ್ಟಿಸುತ್ತಿರುವುದು. ಇದರ ಬಗ್ಗೆ ಸ್ಥಳೀಯರು ಎಷ್ಟೇ ಮನವಿ ಮಾಡಿದರು ಇತ್ತ ಅಧಿಕಾರಿಗಳು ಗಮನ ಹರಿಸದೆ ಇರುವುದಕ್ಕೆ ಇದೀಗ ರಸ್ತೆಯಲ್ಲಿ ಹರಿಯುವ ಮಳೆಯ ನೀರೇ ಸಾಕ್ಷಿಯಾಗಿದೆ. ಇದೀಗ ಈ ಭಾಗದ ಸಾರ್ವಜನಿಕರು, ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡುವಂತಾಗಿದೆ.

ಗ್ರಾಮೀಣ ಭಾಗಗಳ ಕೆಲವು ರಸ್ತೆಯಂತೂ ಕಾಡು ಬಳ್ಳಿಗಳ ಪೊದೆಗಳಿಂದ ಆವರಿಸಿಕೊಂಡಿದೆ. ರಸ್ತೆಯ ಎರಡು ಭಾಗಗಳಲ್ಲಿ ಕಾಡು ಬಳ್ಳಿಗಳು ಸೇರಿಕೊಂಡು ತಿರುವು ರಸ್ತೆಗಳು ಗೋಚರಿಸದೆ ಅಪಘಾತಗಳು ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗಿದೆ.
ಅಲ್ಲಲ್ಲಿ ವಿದ್ಯುತ್ ಕಂಬಗಳಿಗೆ ಗಿಡ ಬಳ್ಳಿಗಳು ಸುತ್ತಿಕೊಂಡು ಕಂಬದ ಎತ್ತರಕ್ಕೆ ಪೊದೆಗಳು ನಿರ್ಮಾಣವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗಳು ಸಂಭವಿಸಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ.

ಚರಂಡಿಗಳಲ್ಲಿ ಹರಿದಾಡಬೇಕಾದ ನೀರು ರಸ್ತೆಗಳಲ್ಲಿ ತುಂಬಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು ವಾಹನ ಸವಾರರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

ಕೆಲವು ಕಡೆಗಳಲ್ಲಿ ಚರಂಡಿ ವ್ಯವಸ್ಥೆಗಳು ಸರಿಯಿಲ್ಲದ ಕಾರಣ ಶಾಲಾ ಪರಿಸರದಲ್ಲಿರುವ ರಸ್ತೆಯ ನೀರುಗಳು ಶಾಲಾ ಆಟದ ಮೈದಾನಗಳಿಗೆ ನುಗ್ಗಿ ಆಟದ ಮೈದಾನ ಕೆಸರುಗದ್ದೆಯಾಗಿ ಮಾರ್ಪಟ್ಟಿದೆ.

ಕೆಲವು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆ ಗೊಂಡಿದ್ದು, ಹಂಚುಗಳು ಒಡೆದು ಶಾಲೆಯ ಕೋಣೆಯೊಳಗೆ ನೀರು ಸೋರುತ್ತಿದ್ದು ಶಾಲೆಗಳ ಗೋಡೆಗಳು ಕುಸಿಯುತ್ತಿರುವುದು ಕಂಡುಬರುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಸುಳ್ಯ ನಗರದ ಜಟ್ಟಿಪಳ್ಳ ವಾರ್ಡಿನಲ್ಲಿರುವ ಶಾಲೆಯ ಗೋಡೆ ಜೂನ್ 29ರಂದು ರಾತ್ರಿ ಮಳೆಗೆ ಕುಸಿದು ಬಿದ್ದಿದ್ದು ರಾತ್ರಿ ಘಟನೆ ನಡೆದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಶಿಥಿಲಗೊಂಡಿರುವ ಗೋಡೆಗಳ ಬಗ್ಗೆ ಸಂಬಂಧಪಟ್ಟವರಿಗೆ ಮೊದಲೇ ಮಾಹಿತಿ ನೀಡಿರುವುದಾಗಿ ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

ಈ ಎಲ್ಲಾ ಸಮಸ್ಯೆಗಳ ಮೂಲ ಕಾರಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಇಲಾಖೆಯವರಿಗೆ ಇರುವ ಇಚ್ಛಾಶಕ್ತಿಯ ಕೊರತೆ ಮಳೆಗಾಲಕ್ಕೆ ಮುನ್ನ ಪೂರ್ವಭಾವಿ ಸಿದ್ಧತೆಯ ಕೊರತೆಯೆಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.
ಸರ್ಕಾರದಿಂದ ಮತ್ತು ಸ್ಥಳೀಯ ಆಡಳಿತದಿಂದ ಬರುವ ಯೋಜನೆಗಳು ಸಮಯಕ್ಕೆ ಸರಿಯಾಗಿ ಉಪಯೋಗಿಸಿದರೆ ಈ ರೀತಿಯ ತೊಂದರೆಗಳನ್ನು ಸಾರ್ವಜನಿಕರು ಮಳೆಗಾಲದಲ್ಲಿ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.
ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ರೀತಿಯ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷಾ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಮನವಿಯಾಗಿದೆ.
ವರದಿ: ಹಸೈನಾರ್ ಜಯನಗರ

Leave a Reply

Your email address will not be published. Required fields are marked *

error: Content is protected !!