December 16, 2025

ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯರಿಗೆ 5.70 ಕೋಟಿ ರೂ. ವರ್ಗಾವಣೆ: ಬ್ಯಾಂಕ್ ಮ್ಯಾನೇಜರ್ ಬಂಧನ

0
image_editor_output_image1571780878-1656495417119.jpg

ಬೆಂಗಳೂರು: ಠೇವಣಿದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ 5.70 ಕೋಟಿ ರೂ.ಗಳನ್ನು ಸಾಲ ಪಡೆದು ಡೇಟಿಂಗ್‌ ಆಪ್‌ನಲ್ಲಿ ಪರಿಚಯವಾದ ಯುವತಿಗೆ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಹನುಮಂತನಗರದ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ, ಕೇರಳ ಮೂಲದ ಎಸ್. ಹರಿಶಂಕರ್ ವಿಚಾರಣೆ ವೇಳೆ ಸ್ಪೋಟಕ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ. ಈತ ಒಂದಲ್ಲ, ಬರೋಬ್ಬರಿ ಎಂಟು ಯುವತಿಯರಿಗೆ ಈ ಹಣವನ್ನು ಹಂಚಿದ್ದಾನೆ.

ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳ ಮೋಹಕ ಮಾತುಗಳಿಗೆ ಮರುಳಾಗಿ ಆಕೆ ಕೇಳಿದಾಗೆಲ್ಲ ಹಣ ನೀಡಿದ್ದೆ ಎಂಬುದಾಗಿ ಆರೋಪಿ ಮೊದಲು ಬಾಯ್ಬಿಟ್ಟಿದ್ದ. ಆದರೆ ಪೊಲೀಸರು ಹೆಚ್ಚಿನ ತನಿಖೆಗೊಳಪಡಿಸಿದಾಗ ಆತ ಒಬ್ಬಳೇ ಯುವತಿಯಲ್ಲ, ಎಂಟು ಯುವತಿಯರಿಗೆ ಈ ಕೋಟ್ಯಾಂತರ ರೂಪಾಯಿ ಹಣವನ್ನು ಹಂಚಿದ್ದೇನೆ ಎಂಬ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.

ಈತನ ಪತ್ನಿ ಬಾಣಂತನಕ್ಕೆಂದು ತವರಿಗೆ ಹೋಗಿದ್ದು, ಈ ಸಂದರ್ಭ ನೋಡಿಕೊಂಡು ಈತ ಡೇಟಿಂಗ್ ಆಪ್‌ನಲ್ಲಿ ಯುವತಿಯರ ಹಿಂದೆ ಬಿದ್ದಿದ್ದ. ಈ ಯುವತಿಯರಿಗೆ ಹಣ ನೀಡುವ ಸಲುವಾಗಿ ಆತ ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಅನಿತಾ ಎಂಬ ಗ್ರಾಹಕರೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅವರ 1.32 ಕೋಟಿ ರೂ. ಠೇವಣಿ ಆಧಾರದ ಮೇಲೆ 5.70 ಕೋಟಿ ರೂ. ಓವರ್ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದ.

ಬಳಿಕ ಅದನ್ನು ಕೇವಲ ಆರು ದಿನಗಳ ಅವಧಿಯಲ್ಲಿ ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳಿಗೆ ಮತ್ತು ರಾಜ್ಯದ 2 ಖಾತೆಗಳಿಗೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಇದು ಮೇಲಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಹರಿಶಂಕರ್‌ನನ್ನು ಪ್ರಶ್ನೆ ಮಾಡಿದಾಗ ಅಚಾತುರ್ಯ ಎಸಗಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!