December 16, 2025

ಉಳ್ಳಾಲ: ಯುವಕನ ಅಪಹರಿಸಿ, ಚಾರ್ಮಾಡಿ ಘಾಟಿಯಲ್ಲಿ ಕೊಲೆ ಯತ್ನ: ಟ್ಯಾಬ್ಲೆಟ್ ಸೇವಿಸಿ ನಶೆಯಲ್ಲಿದ್ದ ತಂಡದಿಂದ ಕೃತ್ಯ

0
IMG-20220526-WA0003.jpg

ಉಳ್ಳಾಲ: ಐವರ ತಂಡ ಚಾರ್ಮಾಡಿ ಘಾಟಿಯಲ್ಲಿ ಯುವಕನನ್ನು ಕಾರಿನಲ್ಲಿ ಅಪಹರಣ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

ಉಳ್ಳಾಲ ದರ್ಗಾ ಬಳಿಯ ಕಬೀರ್ (26) ಕೊಲೆ ಯತ್ನಕ್ಕೆ ಅಪಹರಣಕ್ಕೊಳಗಾದ ಯುವಕ.

ಉಳ್ಳಾಲದ ತಂಡದಿಂದ ತಪ್ಪಿಸಿಕೊಂಡ ಯುವಕ ರಿಕ್ಷಾ ಮೂಲಕ ಉಳ್ಳಾಲ ತಲುಪಿ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಮೇ.25 ರ ರಾತ್ರಿ 9ರ ಸುಮಾರಿಗೆ ಕೋಟೆಪುರ ಸಮೀಪ ಸಹೋದರನನ್ನು ಬಿಟ್ಟು, ಉಳ್ಳಾಲ ದರ್ಗಾ ಬಳಿಯ ತನ್ನ ಮನೆಯತ್ತ ಹಿಂತಿರುಗುತ್ತಿದ್ದ ಕಬೀರ್ ಬೈಕಿಗೆ ಅಬ್ಬಕ್ಕ ವೃತ್ತದ ಬಳಿ ಕಾರೊಂದು ಢಿಕ್ಕಿ ಹೊಡೆದಿದೆ.

ನೆಲಕ್ಕುರುಳಿದ ಕಬೀರ್ ನನ್ನು ಕಾರಿನಿಂದ ಇಳಿದ ತಂಡ ಹಿಡಿಯಲು ಯತ್ನಿಸಿದಾಗ, ಕಬೀರ್ ಓಡಲು ಯತ್ನಿಸಿದ್ದಾರೆ. ಆದರೆ ಅವರ ಕಾಲಿಗೆ ರಾಡ್ ಎಸೆದು ಓಡದಂತೆ ತಡೆದು, ತಲವಾರಿನ ಹಿಂಭಾಗದಿಂದ ತಲೆಯ ಹಿಂಭಾಗಕ್ಕೆ ಬಡಿದು ಬಳಿಕ ಕಾರೊಳಗಡೆ ಹಾಕಿ ಅಪಹರಿಸಿದ್ದಾರೆ.

ಕಾರಿನ ಒಳಗಡೆ ಇದ್ದ ಐವರ ತಂಡದಲ್ಲಿ ಇಬ್ಬರು ಡ್ರಾಗರ್ ಅನ್ನು ಕಬೀರ್ ಕುತ್ತಿಗೆಗೆ ಹಿಡಿದಿದ್ದರು. ದೂರದ ಚಾರ್ಮಾಡಿ ಘಾಟ್ ಸಮೀಪ ಕಾರು ನಿಲ್ಲಿಸಿದ ತಂಡ ಡ್ರಾಗರ್ ಮೂಲಕ ಕುತ್ತಿಗೆಗೆ ಇರಿಯಲು ಯತ್ನಿಸುತ್ತಿದ್ದಂತೆ, ಆತನ ಕುತ್ತಿಗೆ ಹಿಡಿದ ಕಬೀರ್ ಕಾರಿನಿಂದ ಹೊರಗಿಳಿದು ತಪ್ಪಿಸಿಕೊಂಡಿದ್ದಾರೆ.

ತಪ್ಪಿಸುವ ಧಾವಂತದಲ್ಲಿ ಹೊಂಡವೊಂದಕ್ಕೆ ಉರುಳಿ ಗಾಯವಾಗಿದೆ. ಅಲ್ಲಿಂದ ಕಾಡಿನ ದಾರಿಯಲ್ಲಿ ಓಡಿದ ಕಬೀರ್ ಅವರಿಗೆ ದೂರದಲ್ಲಿ ಮನೆಯೊಂದು ಗೋಚರಿಸಿ ಅಲ್ಲಿ ತೆರಳಿ ವಿಚಾರ ತಿಳಿಸಿದರು. ಮನೆಮಂದಿ ಟೀಶರ್ಟ್, ಚಪ್ಪಲಿಯನ್ನು ಒದಗಿಸಿ ಬಳಿಕ ರಿಕ್ಷಾವೊಂದಕ್ಕೆ ಕರೆ ಮಾಡಿ ಮಂಗಳೂರಿಗೆ ಬಿಡುವಂತೆ ತಿಳಿಸಿದ್ದಾರೆ.

ಕಾರಿನಲ್ಲಿದ್ದ ಐವರು ಅಪಹರಣಕಾರರು ಟ್ಯಾಬ್ಲೆಟ್ ಸ್ಟಿಪ್ ಹಿಡಿದುಕೊಂಡು ಸಂಪೂರ್ಣ ನಶೆಯಲ್ಲಿದ್ದರು. ದಾರಿಯುದ್ದಕ್ಕೂ ಟ್ಯಾಬ್ಲೆಟ್ ಸೇವಿಸುತ್ತಿದ್ದ ಐವರು ಕಬೀರ್ ಗೆ ನಿರಂತರವಾಗಿ ಹಲ್ಲೆ ಮುಂದುವರಿಸಿದ್ದರು. ಅವರ ಮೊಬೈಲಿಗೆ ಬಂದ ಕರೆಯಲ್ಲಿ ‘ಕಬೀರ್ ನನ್ನು ಹತ್ಯೆ ನಡೆಸಿ ಘಾಟಿ ಭಾಗದಲ್ಲಿ ಯಾರಿಗೂ ಹೆಣ ಸಿಗದಂತೆ ಬಿಸಾಡಿರಿ’ ಅನ್ನುವ ಸೂಚನೆಯನ್ನು ನೀಡುತ್ತಲೇ ಇದ್ದರು.

ಸದಕತ್ತುಲ್ಲಾ ಯಾನೆ ಪೊಪ್ಪ, ಉಗ್ರಾಣಿ ಮುನ್ನ, ಇಮ್ಮಿ ಯಾನೆ ಇರ್ಷಾದಿ ಹಾಗೂ ತಾಹೀಬ್, ಅಸ್ಗರ್, ಇಬ್ಬಿ ಎಂಬವರು ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನುತ್ತಾರೆ ಕಬೀರ್.

ಫಿಶ್ ಮಿಲ್ ನಿಂದ ೪೮ ಲಕ್ಷ ರೂ:
ಕೋಟೆಪುರದ ಫಿಶ್ ಆಯಿಲ್ ಮಿಲ್‌ನಲ್ಲಿ ಕಪ್ಪು ಹೊಗೆ ಹೊರಗೆ ಬಿಡುತ್ತಿರುವುದರಿಂದ ಸ್ಥಳೀಯರಿಗೆ, ಮಕ್ಕಳಿಗೆ, ವೃದ್ಧರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕೋಟೆಪುರ ನಿವಾಸಿಗಳು ಸಾರ್ವಜನಿಕವಾಗಿ ಜಿಲ್ಲಾಡಳಿತಕ್ಕೆ ದೂರು ನೀಡಲಾಗಿತ್ತು.

ಇದರಿಂದಾಗಿ ಕಾರ್ಖಾನೆ ಕರ‍್ಯಾಚರಿಸದಂತೆ ತಡೆಯಾಜ್ಞೆ ಬಂದಿತ್ತು. ಒಗ್ಗಟ್ಟಿನಲ್ಲಿ ಎಲ್ಲರೂ ಹೋರಾಡಿದರೂ, ಕೊನೆಯಲ್ಲಿ ಹೋರಾಟದಲ್ಲಿ ಭಾಗವಹಿಸಿದ ಐದು ಮಂದಿ ರೂ. ೪೮ ಲಕ್ಷ ಹಣವನ್ನು ಫಿಶ್ ಮಿಲ್ ಮಾಲೀಕರಿಂದ ಪಡೆದುಕೊಂಡು ತಡೆಯಾಜ್ಞೆಯನ್ನು ಹಿಂಪಡೆಯುವಂತೆ ಮಾಡಿದ್ದರು.

ಇದನ್ನು ಕಬೀರ್ ಅವರ ತಂಡದಲ್ಲಿ ಪ್ರಶ್ನಿಸಿ ಸಾರ್ವಜನಿಕವಗಿ ಹಣ ಪಡೆದಿರುವುದನ್ನು ಹೇಳುತ್ತಲೇ ಬಂದಿದ್ದರು. ಸತತ ನಾಲ್ಕು ತಿಂಗಳಿನಿಂದ ದ್ವೇಷ ಮುಂದುವರಿದು ಬುಧವಾರ ರಾತ್ರಿ ಹತ್ಯೆಗೆ ಸಂಚು ರೂಪಿಸಿದ್ದರು. ಆಸ್ಪತ್ರೆಗೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!