ಸರ್ಕಾರಿ ಉರ್ದು, ಇಂಗ್ಲೀಷ್ ಮೀಡಿಯಂ ಶಾಲೆಯ ಕೊಠಡಿಯೊಂದರ ಮೇಲ್ಛಾವಣಿ ಕುಸಿತ
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆ ಪಕ್ಕದ ಮಹಿಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಮತ್ತು ಇಂಗ್ಲೀಷ್ ಮೀಡಿಯಂ ಶಾಲೆಯ ಕೊಠಡಿಯೊಂದರ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರಿಟ್ ಪದರ ಕುಸಿದು ಬಿದ್ದಿದ್ದು, ಮಕ್ಕಳು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಗುರುವಾರ ನಡೆದಿದೆ.
ವಿದ್ಯಾರ್ಥಿಗಳು ಪ್ರಾರ್ಥನೆಗೆಂದು ತರಗತಿಯಿಂದ ಹೊರಗೆ ಬಂದಿರುವ ವೇಳೆ ಕೊಠಡಿಯೊಳಗಿಂದ ಭಾರೀ ಸದ್ದು ಕೇಳಿಬಂದಿದೆ. ಕೂಡಲೇ ಶಿಕ್ಷಕರು ಹೋಗಿ ನೋಡಿದಾಗ ಮೇಲ್ಛಾವಣಿಯ ಪದರ ಕುಸಿದು ಬಿದ್ದಿರುವುದು ಕಂಡು ಬಂದಿದೆ.
ವಿಷಯ ತಿಳಿದು ಎಸ್ಡಿಎಂಸಿ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸ್ಥಳಕ್ಕಾಗಮಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದರು.
ಆ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸದಂತೆ ಸೂಚಿಸಿದರು. ಇದೇ ವೇಳೆ ಮತ್ತೊಂದು ಬಿರುಕು ಬಿಟ್ಟ ಕೊಠಡಿಯನ್ನೂ ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮವಹಿಸಲು ಶಾಲೆಯ ಮುಖ್ಯಾಧ್ಯಾಪಕಿ ಬಾಗವಾನ ಅವರಿಗೆ ನಿರ್ದೇಶನ ನೀಡಿದರು.





