ಮದುವೆಯಲ್ಲಿ ಅತಿಥಿಗಳಂತೆ ನಟಿಸಿ ಬಾಲಕನ ಚಿನ್ನದ ಸರ ದೋಚಿ ಪರಾರಿ
ಬೆಂಗಳೂರು: ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆರು ವರ್ಷದ ಬಾಲಕನ ಮೂರೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಬಾಲಕ ತನ್ನ ಕುಟುಂಬ ಸದಸ್ಯರೊಂದಿಗೆ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ. ಅತಿಥಿಗಳಂತೆ ನಟಿಸಿದ ಆರೋಪಿಗಳು ಬಾಲಕನನ್ನು ಆಟವಾಡಲು ಹೊರಗೆ ಕರೆದು ಪಾರ್ಕಿಂಗ್ ಜಾಗದಲ್ಲಿ ಚಿನ್ನದ ಸರ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಉದ್ಯಮಿ ರಾಘವೇಂದ್ರ ಎ ಅವರ ಪುತ್ರನ ಸರ ದರೋಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಗನ ಕತ್ತಿನಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿದ್ದನ್ನು ಗಮನಿಸಿದ ರಾಘವೇಂದ್ರ ಅವರು ಮಗನನ್ನು ವಿಚಾರಿಸಿದಾಗ ದರೋಡೆ ನಡೆದಿರುವುದು ಬೆಳಕಿಗೆ ಬಂದಿದೆ.





