ಮೃತ ಮಹಿಳೆಯ ಹೆಸರಿನಲ್ಲಿ ಫೇಸ್ಬುಕ್ ಖಾತೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕೊಲ್ಲಂ: ಪತಿಯ ಮನೆಯಲ್ಲಿ ಕಳೆದ ವರ್ಷ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ವೈದ್ಯೆ ವಿಸ್ಮಯ ಅವರ ಹೆಸರಿನಲ್ಲಿ ಅಪರಿಚಿತರು ಫೇಸ್ಬುಕ್ ಖಾತೆ ತೆರೆದಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ವಿಸ್ಮಯ ಫೋಟೋ ಬಳಸಿಕೊಂಡು ವಿಸ್ಮಯ ವಿಜಿತ್ ಹೆಸರಿನಲ್ಲಿ ಅಪರಿಚಿತರು ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು, ಸುಮಾರು 800 ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.
ಇದರಿಂದ ಆತಂಕಗೊಂಡ ವಿಸ್ಮಯ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ವಿಸ್ಮಯ ಪ್ರಕರಣ ವಿಚಾರಣೆ ವೇಳೆ ಆಕೆಯ ತಂದೆ ನಿರ್ವಹಿಸದ ಇನ್‌ಸ್ಟಾಗ್ರಾಂ ಖಾತೆ ಕುರಿತು ವಾದ ಮಂಡಿಸಲಾಗಿದ್ದು, ಇದೇ ಆಧಾರದಲ್ಲಿ ದೂರು ನೀಡಲಾಗಿದೆ. ಇದೀಗ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇರಳದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ವಿಸ್ಮಯ ಆತ್ಮಹತ್ಯೆ ಪ್ರಕರಣದ ವಿಚಾರಣೆ ಕೊಲ್ಲಂನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ಮೇ 23ರಂದು ತೀರ್ಪು ಹೊರಬೀಳಲಿದೆ. ತೀರ್ಪು ಬರುವುದಕ್ಕೆ ಕೆಲವೇ ದಿನಕ್ಕೆ ಮುನ್ನ ಆಕೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ.




