November 22, 2024

ಪಿಎಸ್ಐ ಅಕ್ರಮ ಪ್ರಕರಣ: ಮತ್ತೆ ಮೂವರು ಸಿಐಡಿ ಪೊಲೀಸರ ವಶಕ್ಕೆ

0

ಕಲಬುರಗಿ: ಪಿಎಸ್ಐ ಅಕ್ರಮ ನೇಮಕಾತಿಗೆ ‌ಸಂಬಂಧಿಸಿದಂತೆ ನಗರದ ಮತ್ತೊಂದು ಪರೀಕ್ಷಾ ‌ಕೇಂದ್ರವಾದ ಎಂ.ಎಸ್. ಇರಾನಿ ಕಾಲೇಜಿನಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಿಐಡಿ ವಿಚಾರಣೆ ವೇಳೆ ಗೊತ್ತಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ತನಿಖಾಧಿಕಾರಿ ಪ್ರಕಾಶ ರಾಠೋಡ ಅವರು ಸ್ಟೇಶನ್ ಬಜಾರ್ ಠಾಣೆಗೆ ರುದ್ರಗೌಡ ಡಿ. ಪಾಟೀಲ, ಮಧ್ಯವರ್ತಿ ಚಂದ್ರಕಾಂತ ‌ಕುಲಕರ್ಣಿ, ಅಭ್ಯರ್ಥಿ ಪ್ರಭು, ಆತನ ತಂದೆ ಶರಣಪ್ಪ ಎಂಬುವರ ವಿರುದ್ಧ ದೂರು ನೀಡಿದ್ದರು.

ರುದ್ರಗೌಡ ಈಗಾಗಲೇ ಸಿಐಡಿ ಬಂಧನದಲ್ಲಿದ್ದು, ಪಾಟೀಲ ಅವರ ಲೆಕ್ಕ ಪರಿಶೋಧಕ ಚಂದ್ರಕಾಂತ ಕುಲಕರ್ಣಿ ಅವರನ್ನು ಪೊಲೀಸರು ಸೋಮವಾರ ರಾತ್ರಿ ವಶಕ್ಕೆ ಪಡೆದರು. ಪ್ರಭು ಹಾಗೂ ಶರಣಪ್ಪ ಅವರನ್ನು ಮಂಗಳವಾರ ಬೆಳಿಗ್ಗೆ ವಶಕ್ಕೆ ಪಡೆಯಲಾಗಿದೆ.

ಎಂ.ಎಸ್. ಇರಾನಿ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಪ್ರಭು ಎಂಬುವವರನ್ನು ಸಿಐಡಿ ಅಧಿಕಾರಿಗಳು ಸೋಮವಾರ ‌ಸಂಜೆ ವಶಕ್ಕೆ ಪಡೆದು ವಿಚಾರಣೆ ‌ನಡೆಸಿದ್ದರು‌. ಪ್ರಭು ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು. ಅಕ್ರಮದ ಮೂಲಕ ಆಯ್ಕೆಯಾಗಲು ₹ 50 ಲಕ್ಷವನ್ನು ರುದ್ರಗೌಡ ಪಾಟೀಲಗೆ ನೀಡಲಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದರಲ್ಲಿ ಮಧ್ಯವರ್ತಿಯಾಗಿ ರುದ್ರಗೌಡ ಲೆಕ್ಕಪರಿಶೋಧಕ ಚಂದ್ರಕಾಂತ ‌ಕುಲಕರ್ಣಿ ಕೆಲಸ ಮಾಡಿದ್ದರು ಎಂದು ತನಿಖೆ ವೇಳೆ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದರೊಂದಿಗೆ ಕಲಬುರಗಿಯ ಎರಡು ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದು ಬಹಿರಂಗವಾಗಿದೆ.

Leave a Reply

Your email address will not be published. Required fields are marked *

error: Content is protected !!