‘ರಕ್ತ ಚಂದನ’ ದೋಚಿದ್ದ ಆರೋಪಿಗೆ ಪಿಎಸ್‌ಐ ಪರೀಕ್ಷೆಯಲ್ಲಿ 27ನೇ ರ‍್ಯಾಂಕ್: ಅಕ್ರಮ ಬಯಲುಗೊಳಿಸಿದ ಸಿಐಡಿ
ಬೆಂಗಳೂರು: ಹೊಸಕೋಟೆ ಬಳಿ ‘ರಕ್ತ ಚಂದನ’ ದೋಚಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದು ಅಮಾನತಾಗಿದ್ದ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯ ಹೆಡ್ ಕಾನ್‌ಸ್ಟೆಬಲ್ ಮಮತೇಶ್ ಗೌಡ, 545 ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಎಸಗಿ 27ನೇ ರ‍್ಯಾಂಕ್ (ಸೇವಾನಿರತ ಅಭ್ಯರ್ಥಿ) ಪಡೆದಿರುವುದನ್ನು ಸಿಐಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಒಎಂಆರ್ ಪ್ರತಿ ತಿದ್ದಿ ಹಾಗೂ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ್ದ ಆರೋಪದಡಿ 22 ಅಭ್ಯರ್ಥಿಗಳ ವಿರುದ್ಧ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಹೆಡ್ ಕಾನ್‌ಸ್ಟೆಬಲ್ ಮಮತೇಶ್ ಗೌಡ, ಕಾನ್‌ಸ್ಟೆಬಲ್‌ಗಳಾದ ಗಜೇಂದ್ರ, ಯಶವಂತ ದೀಪ, ಸಾಮಾನ್ಯ ಅಭ್ಯರ್ಥಿಗಳಾದ ಮಧು, ರಘುವೀರ್, ನಾಗರಾಜ್, ಮೋಹನ್‌ಕುಮಾರ್, ನಾರಾಯಣಸ್ವಾಮಿ, ಪವನ್‌ಕುಮಾರ್ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ 10 ಅಭ್ಯರ್ಥಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಕಲಬುರಗಿ ಚೌಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ.
ಹೊಸದಾಗಿ ದಾಖಲಾಗಿರುವ ಪ್ರಕರಣದ ತನಿಖೆಯನ್ನೂ ಸಿಐಡಿ ಅಧಿಕಾರಿಗಳು ಮುಂದುವರಿಸಲಿದ್ದಾರೆ. ಪ್ರಕರಣದ ತನಿಖೆಯನ್ನು ಹಸ್ತಾಂತರಿಸುವ ಸಂಬಂಧ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಲಕ್ಷಾಂತರ ರೂಪಾಯಿ ನೀಡಿರುವ ಮಮತೇಶ್: ‘ಬಂಧಿತ ಹೆಡ್ ಕಾನ್‌ಸ್ಟೆಬಲ್ ಮಮತೇಶ್ ಗೌಡ, ಬೆಂಗಳೂರು ಸಿಸಿಬಿ ವಿಭಾಗದಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ.
2021 ಡಿಸೆಂಬರ್‌ನಲ್ಲಿ ಆತನನ್ನು ಮಹದೇವಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಅದಾದ ನಂತರವೂ, ಸಿಸಿಬಿ ವಿಭಾಗದಲ್ಲೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ’ ಎಂದು ಸಿಐಡಿ ಮೂಲಗಳು
ಹೇಳಿವೆ.