ಆಹಾರ ಪದ್ಧತಿ ಅವರವರ ಹಕ್ಕು, ಯಾರಿಗೂ ಬಲವಂತ ಮಾಡುವಂತಿಲ್ಲ: ಸಚಿವ ಆರ್.ಅಶೋಕ್
ಬೆಂಗಳೂರು: ಆಹಾರ ಪದ್ಧತಿ ಅವರವರ ಹಕ್ಕಾಗಿದ್ದು ಇದನ್ನೇ ತಿನ್ನಿ, ಹೀಗೆ ತಿನ್ನಿ ಎಂದು ಯಾರಿಗೂ ಬಲವಂತ ಮಾಡುವಂತಿಲ್ಲ ಇದನ್ನು ಸರ್ಕಾರವು ಸಹಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಕಲಾಪದಲ್ಲಿ ಚುನಾವಣಾ ಸುಧಾರಣೆ ಕುರಿತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚಿಸುತ್ತಿದ್ದ ವೇಳೆ, ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಹಲಾಲ್ ವಿವಾದ ದೊಡ್ಡ ಸಂಘರ್ಷವನ್ನು ಉಂಟು ಮಾಡುತ್ತಿದೆ. ಬಿಜೆಪಿ ಸದಸ್ಯರು ಬೇಸರಿಸಬೇಡಿ ಯಾಕೆಂದರೆ ಇದನ್ನು ನಾವು – ನೀವೇ ಮಾಡಿದ್ದೀರಿ ಎಂದು ಹೇಳುವುದಿಲ್ಲ. ಆದರೆ ಮೂರು ದಿನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷ ಕೆಲವು ಮುಖಂಡರ ಹೇಳಿಕೆಗಳು, ಸಂಘಟನೆಗಳ ಹೇಳಿಕೆಗಳನ್ನು ಗಮನಿಸಿದರೆ ನಾವೇನು ನಾಗರಿಕ ಸಮಾಜದಲ್ಲಿದ್ದೇವೆಯೇ ಇಲ್ಲವೇ ಎಂಬ ಕಳವಳ ಹೆಚ್ಚಾಗುತ್ತಿದೆ ಎಂದು ಬೇಸರಿಸಿಕೊಂಡಿದ್ದಾರೆ.
ಈ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಧ್ಯಪ್ರವೇಶಿಸಿ, ಆಹಾರ ಪದ್ದತಿ ಅವರವರ ಹಕ್ಕಾಗಿದ್ದು ತಮಗೆ ಬೇಕಾದನ್ನು ತಿನ್ನುತ್ತಾರೆ. ಎಲ್ಲಿ ಯಾರು ಬೇಕಾದರೂ ಖರೀದಿ ಮಾಡಬಹುದು. ಹಾಗೊಂದು ವೇಳೆ ಯಾರಾದರೂ ಬಲವಂತ ಮಾಡಿದರೆ ಅದನ್ನು ಸಹಿಸಲ್ಲ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕ ರಮೇಶ್‍ಕುಮಾರ್ ಚುನಾವಣೆ ಹತ್ತಿರ ಇರುವಾಗ ಇನ್ನು ಏನೇನು ಬರುತ್ತವೆಯೋ ದೇವರೇ ಬಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.





