ಮಂಗಳೂರು ವಿಶ್ವವಿದ್ಯಾನಿಲಯದ ವಿರುದ್ಧ ಪ್ರತಿಭಟನೆ: ಕ್ಯಾಂಪಸ್ ಫ್ರಂಟ್ ನಾಯಕರ ಬಂಧನ
ಮಂಗಳೂರು: ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತು ಉದ್ಘಾಟನಾ ಸಮಾರಂಭಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅತಿಥಿಯಾಗಿ ಆಗಮಿಸುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಇಂದು ವಿವಿಯ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದೆ.

ಇಂದು ಬೆಳಗ್ಗೆ ಮಂಗಳೂರು ವಿವಿಯ ಮುಖ್ಯ ಗೇಟ್ ಬಳಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ಮಂಗಳೂರು ವಿವಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಿದರು.
ಈ ವೇಳೆ ವಿವಿಯ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ತಳ್ಳಾಟ ನೂಕಾಟವಾಯಿತು. ಸದ್ಯ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ನಾಯಕರನ್ನು ಬಂಧಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಆಗಮಿಸುತ್ತಾರೆ ಎಂದು ತಿಳಿದು ಈ ಮೊದಲೇ ಅಪಸ್ವರ ಕೇಳಿಬಂದಿತ್ತು. ಕಲ್ಲಡ್ಕ ಪ್ರಭಾಕರ್ ಭಟ್ ಶಿಕ್ಷಣ ಸಂಸ್ಥೆಗೆ, ವಿಶ್ವವಿದ್ಯಾಲಯಕ್ಕೆ ಕರೆಸುವ ಬಗ್ಗೆ ವಿರೋಧ ವ್ಯಕ್ತವಾಗಿದ್ದವು. ಸದ್ಯ ಕಾರ್ಯಕ್ರಮ ಆರಂಭವಾಗಿದ್ದು, ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ಇಂತಹ ನೀಚ ವ್ಯಕ್ತಿಗೆ ಅತಿಥಿಯಾಗಿ ಕರೆಯುವುದು ಹಾಸ್ಯಾಸ್ಪದ. ಕ್ರಿಮಿನಲ್ ಹಿನ್ನೆಲೆಯ ಹಾಗೂ ವಿದ್ಯಾರ್ಥಿಗಳ ಮಧ್ಯೆ ಕೋಮುಪ್ರಚೋದನೆ ಮಾಡುವ ಭಾಷಣವನ್ನು ವ್ಯಕ್ತಿಯನ್ನು ಕರೆದಿದ್ದಾರೆ ಎಂದು ಆರೋಪಿಸಿದರು.





