ಡ್ರಗ್ ಮಾಫಿಯಾಕ್ಕೆ ಸೆಡ್ಡುಹೊಡೆದ ಮಹಿಳಾ ಪೊಲೀಸ್ ಅಧಿಕಾರಿ ವಿರುದ್ಧ ಅಮಿತ್ ಶಾ ಪ್ರಚಾರ.
ಗುವಾಹಟಿ: ಮಣಿಪುರದಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಸೆಡ್ಡುಹೊಡೆದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಇಂಫಾಲ್ ಪೂರ್ವದ ಯೈಸ್ಕುಲ್ ಅಸೆಂಬ್ಲಿ ಕ್ಷೇತ್ರದಲ್ಲಿ ಪೊಲೀಸ್ ಅಧಿಕಾರಿಯ ವಿರುದ್ಧ ಮನೆ ಮನೆಗೆ ಪ್ರಚಾರ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಬೃಂದಾ ತೌನೋಜಮ್ ಅವರನ್ನು ವಿಭಿನ್ನ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ. ಬೃಂದಾ ಅವರ ಮಾವ ರಾಜ್ಯದ ವಿರುದ್ಧ ಸಶಸ್ತ್ರ ಚಳವಳಿಯ ನೇತೃತ್ವ ವಹಿಸಿದ್ದರು. ಆದರೆ ಬೃಂದಾ ಅವರು ಮಣಿಪುರ ಪೊಲೀಸ್ ಇಲಾಖೆಯಲ್ಲಿ ಮಾದಕವಸ್ತು ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಖ್ಯಮಂತ್ರಿ ಎನ್ . ಬಿರೇನ್ ಸಿಂಗ್ ವಿರುದ್ದ ಡ್ರಗ್ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಹೊರಿಸಿ ಪೊಲೀಸ್ ಪಡೆ ತೊರೆದಿದ್ದರು.
ಈಗ ಅವರು ಬಿಜೆಪಿಯ ಹಾಲಿ ಶಾಸಕ ಹಾಗೂ ಹಾಲಿ ಮಣಿಪುರ ಕಾನೂನು ಸಚಿವ ತೊಕ್ಚೋಮ್ ಸತ್ಯಬ್ರತ ಸಿಂಗ್ ವಿರುದ್ಧ ಜೆಡಿಯು ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
43 ವರ್ಷದ ಬೃಂದಾ ತೌನೋಜಮ್ ಯುವಜನರಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಖ್ಯಾತ ಅಧಿಕಾರಿಯಾಗಿದ್ದ ಅವರು 2018 ರಲ್ಲಿ 27 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಬಳಿಕ ಪ್ರಸಿದ್ಧರಾದರು. ಅವರು ಮಣಿಪುರ ಪೊಲೀಸರ ಮಾದಕ ದ್ರವ್ಯ ವಿರೋಧಿ ಘಟಕದ ಉಪ ಮುಖ್ಯಸ್ಥರಾಗಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಬಿರೇನ್ ಸಿಂಗ್ ಸರಕಾರವು ಅದೇ ವರ್ಷ ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿತು.
ಆದಾಗ್ಯೂ 2020 ರಲ್ಲಿ ಅವರು ಮುಖ್ಯಮಂತ್ರಿಯೊಂದಿಗೆ ಜಗಳವಾಡಿದ ನಂತರ ಬೃಂದಾ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದರು. ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿಯನ್ನು ಖುಲಾಸೆಗೊಳಿಸಲು ಮುಖ್ಯಮಂತ್ರಿ ಸಿಂಗ್ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
“ಬಿಜೆಪಿಯ ಹಾಲಿ ಸಚಿವರಿಗೆ ನನ್ನ ವಿರುದ್ಧ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವರು ಬೇಕಾಗಿರುವುದನ್ನು ನಾನು ಪ್ರಶಂಸೆಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಹೋರಾಟ ಡ್ರಗ್ಸ್ ಹಾವಳಿ ಮತ್ತು ಭ್ರಷ್ಟಾಚಾರದ ವಿರುದ್ಧ. ಪೊಲೀಸ್ ಅಧಿಕಾರಿಯಾಗಿ ನಾನು ಜನರಿಗೆ ಹೆಚ್ಚಿನದನ್ನು ಮಾಡಲು ಸಾಧ್ಯವಾಗಲಿಲ್ಲ. ರಾಜ್ಯ ವಿಧಾನಸಭೆಯಲ್ಲಿ ಪ್ರಭಾವವನ್ನು ಸೃಷ್ಟಿಸಲು ನಾನು ಬಯಸುತ್ತೇನೆ” ಎಂದು ಬೃಂದಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕಾಗಿ ಬಂದಿರುವುದಕ್ಕೆ ಬೃಂದಾ ಅವರ ಜನಪ್ರಿಯತೆಯೇ ಕಾರಣ ಎನ್ನಲಾಗುತ್ತಿದೆ.