ಬಿಎಸ್ವೈ ಯುಗಾಂತ್ಯ, ರಾಜ್ಯದಲ್ಲಿ ಎರಡನೇ ನಾಯಕತ್ವದ ಅಗತ್ಯವಿದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಯುಗಾಂತ್ಯವಾಗಿದ್ದು, ರಾಜ್ಯದಲ್ಲಿ ಪರ್ಯಾಯ ಅಂದರೆ ಎರಡನೇ ನಾಯಕತ್ವದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಬುಧವರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಇನ್ನೂ 3-4 ಜನರಿದ್ದಾರೆ ಅವರದ್ದೂ ಮುಗಿಯಲು ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ರೀತಿ ಬದಲಾವಣೆ ಅಗತ್ಯವಾಗಿದೆ ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ.
ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಅಂತಾ ನಾನು ಹೇಳಿಲ್ಲ. ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳುತ್ತಿದ್ದೇನೆ. ಇದಕ್ಕಾಗಿ ಪಕ್ಷದ ವರಿಷ್ಠರು ಹೊಸ ಪ್ರಕ್ರಿಯೆ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು 2023ರ ಚುನಾವಣೆಗೆ ಒಳ್ಳೆ ಟೀಮ್ ರಚಿಸಿ ಮತ್ತೆ ಅಧಿಕಾರಕ್ಕೆ ಬರುವ ಪ್ಲ್ಯಾನ್ ಇಟ್ಟಿಕೊಂಡು ಬದಲಾವಣೆ ಮಾಡಬೇಕು ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.