ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಂಟರ ಸಂಘಗಳ ಒಕ್ಕೂಟದಿಂದ ನೀಡುವ ಪ್ರಾಯೋಜಕತ್ವಕ್ಕೆ ಚಾಲನೆ: ಪದ್ಮಶ್ರೀ ಹರೇಕಳ ಹಾಜಬ್ಬ, ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಗೆ ಸನ್ಮಾನ
ಮಂಗಳೂರು: ಅನ್ನದಾನ ಶ್ರೇಷ್ಟವಾದದ್ದು. ಹಸಿದವನ ಹೊಟ್ಟೆಗೆ ಒಂದು ತುಂಡು ರೊಟ್ಟಿ ಸಿಕ್ಕರೆ ಆತನಿಗಾಗುವ ಪರಮಾನಂದ ದಾನಿಗಳನ್ನು ಸ್ವರ್ಗದ ಬಾಗಿಲು ಕೊಂಡೊಯ್ಯಬಲ್ಲುದು. ಈ ನಿಟ್ಟಿನಲ್ಲಿ ಎಂ.ಫ್ರೆಂಡ್ಸ್ ಜೊತೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅನ್ನದಾನದ ಸೇವೆ ಮಾಡಲು ಉತ್ಸುಕವಾಗಿದೆ. ಕಳೆದ ನಾಲ್ಕು ವರ್ಷದಿಂದ ಪ್ರತಿವರ್ಷ ಒಂದು ತಿಂಗಳ ಪ್ರಾಯೋಜಕತ್ವ ನೀಡುತ್ತಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು.
ಅವರು ಸೋಮವಾರ ಮಂಗಳೂರು ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಗಳ ಜೊತೆಗಾರರಿಗೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಪ್ರತಿದಿನ ನೀಡುತ್ತಿರುವ ರಾತ್ರಿಯ ಆಹಾರದ ಫೆಬ್ರವರಿ ತಿಂಗಳ ಪ್ರಾಯೋಜಕತ್ವವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವೆನ್ಲಾಕ್ ಫಿಸಿಯೋಥೆರಪಿ ಸೆಂಟರ್ ಬಳಿ ನಡೆದ ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ, ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪದ್ಮಶ್ರೀ ವಿಜೇತರಿಗೆ ಗೌರವಧನ ವಿತರಿಸಲಾಯಿತು. ವೆನ್ಲಾಕ್ ಆಸ್ಪತ್ರೆ ಆರ್.ಎಂ.ಓ. ಡಾ. ಸುಧಾಕರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎಂ.ಫ್ರೆಂಡ್ಸ್ ಎನ್ನಾರೈ ಸದಸ್ಯ ಫಾರೂಕ್ ಜುಬೈಲ್ ಮುಖ್ಯ ಅತಿಥಿಯಾಗಿದ್ದರು. ಎಂ.ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಹನೀಫ್ ಗೋಳ್ತಮಜಲು ಅಧ್ಯಕ್ಷತೆ ವಹಿಸಿದರು.
ಎಂ.ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ ಸ್ವಾಗತಿಸಿದರು. ಸದಸ್ಯ ಎಡ್ವಕೇಟ್ ಶೇಖ್ ಇಸಾಕ್ ವಂದಿಸಿದರು. ಹೇಮಂತ್ ಶೆಟ್ಟಿ, ರವಿ ಶೆಟ್ಟಿ, ಉದಯ ಅಮೈ, ಕರೀಂ ಕುದ್ದುಪದವು, ಆರಿಫ್ ಪಡುಬಿದ್ರಿ, ಮಹಮ್ಮದ್ ಟಿ.ಕೆ., ಅನ್ವರ್ ಹುಸೈನ್, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಫಾಕ್, ಝಕರಿಯಾ ಉಪಸ್ಥಿತರಿದ್ದರು.





