ವಿಟ್ಲ: ನ.20ರಂದು ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ-ಪಾದಯಾತ್ರೆ ಮೂಲಕ ಸಮಾಪನ
ವಿಟ್ಲ: ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ ಕಾರ್ಯಕ್ರಮದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕೊನೆಯ ಕಾರ್ಯಕ್ರಮವಾಗಿ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಕ್ತಿಯ ಹಳೆ ಬಸ್ ನಿಲ್ದಾಣದಲ್ಲಿ ನ.೨೦ರಂದು ನಡೆಯಲಿದೆ. ಅತಿಥಿ ಗೃಹದ ಬಳಿಯಿಂದ ಹೊರಟ ಪಾದಯಾತ್ರೆ ಪಶು ಆಸ್ಪತ್ರೆಯ ತನಕ ಸಾಗಿ ಅಲ್ಲಿಂದ ಹಳೆ ಬಸ್ ನಿಲ್ದಾಣಕ್ಕೆ ಮರಳಲಿದೆ ಎಂದು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಉದಯ ಕುಮಾರ್ ಆಲಂಗಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ದೈನಂದಿನ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದೆ. ಅರ್ಹ ಫಲಾನುಭವಿಗಳಿಗೆ ಬರುತ್ತಿದ್ದ ಮಾಸಾಶನ ಸ್ಥಗಿತವಾಗಿದೆ. ಕುರ್ಚಿ ಕಾಳಗದಿಂದ ಅಭಿವೃದ್ಧಿ ಶೂನ್ಯವಾಗಿದೆ. ಮರಳು ಕೆಂಪು ಕಲ್ಲು ಬೆಲೆಏರಿಕೆಯಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗಿದೆ. ಕಾಮಗಾರಿಯ ಬಗ್ಗೆ ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಕಾರ್ಯವಾಗುತ್ತಿದೆ. ಬೆಳೆ ವಿಮೆ ವಿಚಾರದಲ್ಲಿ ಸೂಕ್ತ ಪರಿಹಾರ ಲಭಿಸುತ್ತಿಲ್ಲ. ಎಸ್ ಐ ಆರ್ ಮೂಲಕ ನಕಲಿ ಮತರಾರರನ್ನು ತೆಗೆಯುವ ಪ್ರಕ್ರಿಯೆಗೆ ಕಾಂಗ್ರೆಸ್ ಅಡ್ಡಿ ಪಡಿಸುತ್ತಿದೆ. ವಿಟ್ಲದ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ, ಸಂಸದ, ವಿಧಾನ ಪರಿಷತ್ ಸದಸ್ಯ ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಮೋಹನದಾಸ ಉಕ್ಕುಡ, ಶ್ರೀಕೃಷ್ಣ ವಿಟ್ಲ, ಹರೀಶ್ ವಿಟ್ಲ, ರವೀಶ್ ವಿಟ್ಲ, ನರ್ಸಪ್ಪ ಪೂಜಾರಿ, ಮಂಜುನಾಥ ಕಲ್ಲಕಟ್ಟ, ಸದಾನಂದ ಸೇರಾಜೆ ಉಪಸ್ಥಿತರಿದ್ದರು.




