November 18, 2026

ಸುರತ್ಕಲ್, ಬೈಕಂಪಾಡಿಯಲ್ಲಿ ತಿಂಡಿ ತಯಾರಿಕಾ ಘಟಕಕ್ಕೆ ಬೀಗ: ಪ್ರತಿಷ್ಠಿತ ಹೋಟೆಲ್‌ಗಳ ವಿರುದ್ಧ ಪ್ರಕರಣ

0
image_editor_output_image493825212-1794979383395

ಮಂಗಳೂರು: ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಹೋಟೆಲ್ ಹಾಗೂ ಆಹಾರ ತಯಾರಿಕಾ ಘಟಕಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಬಿಸಿ ಮುಟ್ಟಿಸಿದೆ. ಜಿಲ್ಲಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಐದು ವಿಶೇಷ ತಂಡಗಳು ಸೋಮವಾರ (ನ.16) ಸುರತ್ಕಲ್ ಹಾಗೂ ಬೈಕಂಪಾಡಿ ವ್ಯಾಪ್ತಿಯಲ್ಲಿ ಮಿಂಚಿನ ದಾಳಿ ನಡೆಸಿ ಪರಿಶೀಲನೆ ನಡೆಸಿವೆ.ಮಂಗಳೂರು ಸುದ್ದಿ

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಫಾರ್ಚುನ್ ಇಂಡಸ್ಟ್ರೀಸ್’ ಘಟಕದಲ್ಲಿ ‘ಚೀಸ್ ಬಾಲ್’  ಸ್ನಾಕ್ಸ್ ತಯಾರಿಸಲಾಗುತ್ತಿತ್ತು. ತಪಾಸಣೆಯ ವೇಳೆ ಘಟಕದಲ್ಲಿ ತೀವ್ರ ಅನೈರ್ಮಲ್ಯ ಇರುವುದು ಹಾಗೂ ಹೆಗ್ಗಣಗಳು ಓಡಾಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣವೇ ಘಟಕವನ್ನು ಮುಟ್ಟುಗೋಲು (ಸೀಜ್) ಹಾಕಿ, ಬೀಗಮುದ್ರೆ ಹಾಕಿದ್ದಾರೆ. ಶುಚಿತ್ವ ಕಾಪಾಡಿಕೊಳ್ಳದ ಸುರತ್ಕಲ್‌ನ ‘ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್’ ವಿರುದ್ಧ ಹೆಚ್ಚುವರಿ ಜಿಲ್ಲಾಧಿಕಾರಿಗಳ (ADC) ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ, ಸುರತ್ಕಲ್‌ನ ‘ಮೆಕ್‌ಡೊನಾಲ್ಡ್ಸ್’ ರೆಸ್ಟೋರೆಂಟ್‌ನ ಅಡುಗೆ ಕೋಣೆಯಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಯೋಗಾಲಯಕ್ಕೆ ಆಹಾರ ಮಾದರಿ ರವಾನೆ: ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ಮೆಕ್‌ಡೊನಾಲ್ಡ್ಸ್‌ನಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ (ಲ್ಯಾಬ್) ಕಳುಹಿಸಲಾಗಿದೆ. ಸುರತ್ಕಲ್‌ನ ‘ಮೋರ್’ (More) ರಿಟೇಲ್ ಮಳಿಗೆ, ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ‘ಬ್ಲಿಂಕ್‌ಇಟ್’ (Blinkit) ಗೋದಾಮು ಹಾಗೂ ಎನ್‌ಐಟಿಕೆ (NITK) ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಆಹಾರ ಪೂರೈಸುವ ಅಡುಗೆ ಕೋಣೆಗಳ ಮೇಲೂ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಶುಚಿತ್ವ ಪರಿಶೀಲಿಸಿದ್ದಾರೆ. ಆಹಾರ ತಯಾರಿಕೆ ಮತ್ತು ಮಾರಾಟದಲ್ಲಿ ನೈರ್ಮಲ್ಯ ಹಾಗೂ ಗುಣಮಟ್ಟ ಕಾಪಾಡದವರ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಠಿಣ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!