October 22, 2026

ಶಿವಮೊಗ್ಗ: ದಸರಾ ಜಂಬೂ ಸವಾರಿಯಲ್ಲಿ ಅಂಬಾರಿ ಕೆಳಗೆ ಬೀಳಿಸಿ ಗಾಬರಿಯಿಂದ ಓಡಿದ ಆನೆ

0
image_editor_output_image-960508887-1792612733484

ಶಿವಮೊಗ್ಗ: ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಜಂಬೂ ಸವಾರಿಯ ಮೆರವಣಿಗೆಯ ವೇಳೆ ತಾಯಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಹೆಸರಿನ ಆನೆಯು ಜನಸಂದಣಿ ಮತ್ತು ಗದ್ದಲಕ್ಕೆ ಹದರಿ ಏಕಾಏಕಿ ಅಂಬಾರಿಯನ್ನು ಕೆಳಕ್ಕೆ ಬೀಳಿಸಿ ಗಾಬರಿಯಿಂದ ಓಡಿದ ಘಟನೆ ಸಂಭವಿಸಿದೆ.

ಆನೆಯು ಹೆದರಿ ಓಡಿದ ಪರಿಣಾಮ ಚಾಮುಂಡೇಶ್ವರಿ ಮೂರ್ತಿ ಹೊಂದಿದ್ದ ಬೆಳ್ಳಿಯ ಮಂಟಪ ಕೆಳಗೆ ಬಿದ್ದು ಹಾನಿಗೊಳಗಾಗಿದ್ದು, ಸಾರ್ವಜನಿಕರು ಭಯಭೀತರಾಗಿ ಚದುರಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ವೈದ್ಯರು ಸೋಮಣ್ಣ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ.

ಮೈಸೂರಿನ ಮಾದರಿಯಲ್ಲೇ ಶಿವಮೊಗ್ಗದಲ್ಲೂ ಪ್ರತಿವರ್ಷ ತಾಯಿ ಚಾಮುಂಡೇಶ್ವರಿಯ ಬೆಳ್ಳಿ ಮಂಟಪದ ಜಂಬೂ ಸವಾರಿ ಮೆರವಣಿಗೆ ನಡೆಯುತ್ತದೆ. ಸಕ್ರೆಬೈಲು ಆನೆ ಶಿಬಿರದಿಂದ ಆಗಮಿಸಿದ್ದ ಸಾಗರ, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳಿಗೆ ವಿಶೇಷ ತಾಲೀಮು ನೀಡಲಾಗಿತ್ತು. ಸಾಮಾನ್ಯವಾಗಿ ಪ್ರತಿವರ್ಷ ‘ಸಾಗರ’ ಆನೆ ಅಂಬಾರಿ ಹೊರಡುತ್ತಿತ್ತು. ಆದರೆ, ಈ ಬಾರಿ ಅರಣ್ಯಾಧಿಕಾರಿಗಳು ‘ಸೋಮಣ್ಣ’ ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿದ್ದರು.

ಬುಧವಾರ ಮಧ್ಯಾಹ್ನ ಶಿವಪ್ಪ ನಾಯಕ ಕೋಟೆ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ನಂದಿ ಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ಮಾವುತರು ಹಾಗೂ ಕಾವಾಡಿಗಳು ಆನೆಗಳನ್ನು ಸುಂದರವಾಗಿ ಸಿಂಗರಿಸಿದ್ದರು. ಮೆರವಣಿಗೆ ಸಾಗುತ್ತಿದ್ದಾಗ ರಸ್ತೆಯಲ್ಲಿದ್ದ ಭಾರೀ ಜನಸಂದಣಿ, ವಾದ್ಯಘೋಷಗಳ ಶಬ್ದ ಹಾಗೂ ಗದ್ದಲಕ್ಕೆ ಸೋಮಣ್ಣ ಆನೆ ಏಕಾಏಕಿ ಗಾಬರಿಗೊಂಡಿದೆ. ಈ ವೇಳೆ ಬೆನ್ನ ಮೇಲಿದ್ದ ಅಂಬಾರಿಯನ್ನು ಕೆಳಕ್ಕೆ ಬೀಳಿಸಿ ರಸ್ತೆಯಲ್ಲಿ ಓಡಲು ಪ್ರಾರಂಭಿಸಿದೆ. ಆನೆ ಸಾಗಿದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಲಾಗಿದ್ದ ಎರಡು ಕಾರು ಹಾಗೂ ಮೂರು ಬೈಕ್‌ಗಳು ಜಜ್ಜುಗುಜ್ಜಾಗಿವೆ.

ಆನೆಯನ್ನು ನಿಯಂತ್ರಣಕ್ಕೆ ತರಲು ಮಾವುತರು ಹಾಗೂ ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು. ಘಟನೆಯಿಂದಾಗಿ ಸ್ಥಳದಲ್ಲಿದ್ದ ಸಾವಿರಾರು ಸಾರ್ವಜನಿಕರು ಆತಂಕದಿಂದ ಕಾಲ್ತುಳಿತದ ಭೀತಿಯಲ್ಲಿ ಓಡಿದರು. ಸುರಕ್ಷತೆಯ ದೃಷ್ಟಿಯಿಂದ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆಯನ್ನು ಅರ್ಧದಲ್ಲೇ ರದ್ದುಗೊಳಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಆನೆಗೆ ಅರವಳಿಕೆ ನೀಡಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!