October 18, 2026

ಬಂಟ್ವಾಳ: ಹಣಕಾಸಿನ ವಿಚಾರವಾಗಿ ಗಲಾಟೆ: ವ್ಯಕ್ತಿಗೆ ಚೂರಿ ಇರಿತ

0
image_editor_output_image2007154174-1792327386263

ಬಂಟ್ವಾಳ: ಹಣಕಾಸಿನ ವಿಚಾರವಾಗಿ ನಡೆದ ಮಾತಿನ ಚಕಮಕಿಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಘಟನೆ ಬಂಟ್ವಾಳದ ಬಿ.ಮೂಡ ಗ್ರಾಮದ ಪಲ್ಲಮಜಲು ಜಂಕ್ಷನ್ ನಲ್ಲಿ ಅ.17ರ ರಾತ್ರಿ ನಡೆದಿದೆ. ಬಿ.ಮೂಡ ಗ್ರಾಮದ ಕುಪ್ಪಿಲ ನಿವಾಸಿ ಉದಯ್ ಚೂರಿ ಇರಿತಕ್ಕೊಳಗಾದವರು. ಅಜಿತ್ ಕಲ್ಲಗುಡ್ಡೆ ಎಂಬಾತ ಆರೋಪಿಯಾಗಿದ್ದಾನೆ ಎಂದು ದೂರು ನೀಡಿದ್ದಾರೆ.

ಉದಯ್ ಅವರು ಅಜಿತ್ ಗೆ ಹಲವು ವರ್ಷಗಳಿಂದ ಹಣ ನೀಡಿದ್ದು, ವಾಪಸ್ ಕೇಳುತ್ತಿದ್ದರೂ ಆತ ನೀಡಿರಲಿಲ್ಲ ಎನ್ನಲಾಗಿದೆ. ಅ.17ರಂದು ರಾತ್ರಿ ಹಣ ಕೇಳುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಬಳಿಕ ಹಣ ನೀಡುವುದಾಗಿ ಹೇಳಿ ಅಜಿತ್, ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್ ಗೆ ಕರೆಸಿಕೊಂಡಿದ್ದ. ಅದರಂತೆ ರಾತ್ರಿ 8.50ರ ಸುಮಾರಿಗೆ ಆಟೋರಿಕ್ಷಾದಲ್ಲಿ ಬಂದ ಉದಯ್ ಅವರೊಂದಿಗೆ ಮತ್ತೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ, ಹಣ ಕೇಳುತ್ತೀಯಾ, ನಿನ್ನನ್ನು ಮುಗಿಸಿದರೆ ಹಣ ನೀಡುವ ಅಗತ್ಯವಿಲ್ಲ ಎಂದು ಹೇಳಿ ಅಜಿತ್ ಚೂರಿಯಿಂದ ಉದಯ್ ಅವರ ಹೊಟ್ಟೆಯ ಬಲಭಾಗಕ್ಕೆ ಇರಿದಿದ್ದಾನೆ. ಮತ್ತೊಮ್ಮೆ ಇರಿಯಲು ಯತ್ನಿಸಿದಾಗ ತಡೆಯಲು ಹೋದ ಉದಯ್ ಅವರ ಎಡಗೈ ಮಣಿಕಟ್ಟಿಗೂ ಗಾಯವಾಗಿದೆ ಎನ್ನಲಾಗಿದೆ.

ಈ ಸಂದರ್ಭ ಅಣ್ಣನ ಕೂಗು ಕೇಳಿ ಸ್ಥಳಕ್ಕೆ ಬಂದ ಲೋಕೇಶ್ ಅವರ ಮೇಲೂ ಚೂರಿ ಹಿಡಿದು ಅಜಿತ್ ಅಟ್ಟಿಸಿಕೊಂಡು ಬಂದಿದ್ದಾನೆ. ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡ ಉದಯ್ ಅವರನ್ನು ಸ್ಥಳೀಯರಾದ ಸಾಜಿದ್ ಮತ್ತು ಸಫಾಜ್ ಅವರು ಆಟೋರಿಕ್ಷಾದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.

ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ಈ ಕುರಿತು ಸಹೋದರ ಲೋಕೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!