October 18, 2026

ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಗುಂಪಿನ ಮೇಲೆ ಹರಿದ ಲಾರಿ: 13 ಮಂದಿ ಸ್ಥಳದಲ್ಲೇ ಮೃತ್ಯು, 40ಕ್ಕೂ ಅಧಿಕ ಜನರಿಗೆ ಗಾಯ

0
image_editor_output_image-1915506404-1792327129019

ಗ್ವಾಲಿಯರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಭಾನುವಾರ ಮುಂಜಾನೆ ಅತ್ಯಂತ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಪವಿತ್ರ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪ್ರಸಿದ್ಧ ಶೀತಲಾ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಭಕ್ತರ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಲಾರಿಯೊಂದು ನುಗ್ಗಿದ ಪರಿಣಾಮ, ಕನಿಷ್ಠ 13 ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದು, 40ಕ್ಕೂ ಅಧಿಕ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.


ಛಿನೋರ್ ಕಡೆಯಿಂದ ಭತ್ತವನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯು ಶನಿವಾರ ತಡರಾತ್ರಿ ಸುಮಾರು 1:30ರ ಸುಮಾರಿಗೆ ಈ ದುರಂತ ಎಳೆಗೈದಿದೆ ಎಂದು ಗ್ವಾಲಿಯರ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಪ್ರದೇಶವು ಕಡಿದಾದ ಇಳಿಜಾರಿನಿಂದ ಕೂಡಿದ್ದು, ಇಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ರಾತ್ರಿ ವೇಳೆ ನಿರ್ಬಂಧ ವಿಧಿಸಲಾಗಿತ್ತು. ವಾಹನಗಳ ನಿಯಂತ್ರಣಕ್ಕಾಗಿ ಪೊಲೀಸರು ಬ್ಯಾರಿಕೇಡ್ ಹಾಗೂ ತಪಾಸಣಾ ಕೇಂದ್ರವನ್ನು ಸ್ಥಾಪಿಸಿದ್ದರು.

ರಾತ್ರಿ ಸುಮಾರು 1:30ಕ್ಕೆ ಆ ಮಾರ್ಗವಾಗಿ ಬಂದ ಭತ್ತದ ಲಾರಿಯನ್ನು ತಡೆಯಲು ಯತ್ನಿಸಿದರೂ, ಲಾರಿ ಪೊಲೀಸ್ ತಡೆಗೋಡೆಯನ್ನು ಮುರಿದು ಮುನ್ನುಗ್ಗಿದೆ. ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ, ರಸ್ತೆಯಲ್ಲಿದ್ದ ನೂರಾರು ಭಕ್ತರ ಮೇಲೆ ಹರಿದು, ಬಳಿಕ ದೇವಸ್ಥಾನದ ಪ್ರವೇಶದ್ವಾರ ಹಾಗೂ ಹೊರಗೋಡೆಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ.

Leave a Reply

Your email address will not be published. Required fields are marked *

error: Content is protected !!