October 17, 2026

ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲ್ ಸೇರಿ 8 ಆರೋಪಿಗಳ ಜಾಮೀನು ಆದೇಶಕ್ಕೆ ಹೈಕೋರ್ಟ್ ತಡೆ

0
image_editor_output_image1302283997-1792206467223

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣದಲ್ಲಿ ಭರತ್ ಕುಮ್ಡೇಲ್ ಸೇರಿದಂತೆ ಎಂಟು ಆರೋಪಿಗಳಿಗೆ ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ) ಅಡಿ ಬಂಧಿತರಾಗಿದ್ದ ಭರತ್ ಕುಮ್ಡೇಲ್, ಪ್ರದೀಪ್, ರಂಜಿತ್, ಶಿವಪ್ರಸಾದ್, ಅಭಿನ್ ರೈ, ಸಾಹಿತ್, ಸಚಿನ್ ಹಾಗೂ ತೇಜಾಕ್ಷ ಅವರು ಬಿಎನ್ಎಸ್ಎಸ್ ಕಲಂ 483ರ ಅಡಿಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಇತ್ತೀಚಿಗೆ ಮೈಸೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಆದರೆ, ಆರೋಪಿಗಳು ಗೂಂಡಾ ಕಾಯ್ದೆಯಡಿ ಬಂಧನದಲ್ಲಿಯೇ ಮುಂದುವರಿಯಬೇಕಿದ್ದ ಕಾರಣ, ಜಾಮೀನು ಮಂಜೂರಾದರೂ ಅವರು ತಕ್ಷಣ ಜೈಲಿನಿಂದ ಬಿಡುಗಡೆಯಾಗುವಂತಿರಲಿಲ್ಲ. ಈ ಮಧ್ಯೆ, ಸ್ಥಳೀಯ ನ್ಯಾಯಾಲಯದ ಜಾಮೀನು ಆದೇಶವನ್ನು ಸರಕಾರದ ಪರವಾಗಿ ಅಡ್ವೊಕೇಟ್ ಜನರಲ್ ಮೂಲಕ ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕ್ರಿಮಿನಲ್ ಪಿಟಿಷನ್ ಸಂಖ್ಯೆ 15386/2026ರಲ್ಲಿ ಅಕ್ಟೋಬರ್ 15ರಂದು ಆರೋಪಿಗಳಿಗೆ ಜಾಮೀನು ನೀಡಿದ್ದ ಆದೇಶಕ್ಕೆ ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆ ನೀಡಿದೆ. ಅಲ್ಲದೆ, 1ರಿಂದ 8ನೇ ಆರೋಪಿಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಸರಕಾರಿ ಅಭಿಯೋಜಕರು ಮಂಡಿಸಿದ ವಾದ ಹಾಗೂ ಪ್ರಮಾಣಪತ್ರದೊಂದಿಗೆ ಸಲ್ಲಿಸಲಾದ ಅರ್ಜಿಯಲ್ಲಿನ ಅಂಶಗಳನ್ನು ಪರಿಗಣಿಸಿ ನ್ಯಾಯಾಲಯ ಈ ಮಧ್ಯಂತರ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!