WWE ಕುಸ್ತಿಪಟು ಗ್ರೇಟ್ ಖಲಿ ಸಂಚರಿಸುತ್ತಿದ್ದ ಕಾರು ಅಪಘಾತ
ಹರ್ಯಾಣ: ಹರ್ಯಾಣದ ಪಾಣಿಪತ್‌ನಲ್ಲಿ ಖ್ಯಾತ ಡಬ್ಲ್ಯುಡಬ್ಲ್ಯುಇ (WWE) ಕುಸ್ತಿಪಟು ಗ್ರೇಟ್ ಖಲಿ (ದಲೀಪ್ ಸಿಂಗ್ ರಾಣಾ) ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಶನಿವಾರ (ಆ.29) ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದ್ದು, ಈ ಕುರಿತು ವೀಡಿಯೋ ಹಂಚಿಕೊಂಡಿರುವ ಖಾಲಿ, ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ, ಅಭಿಮಾನಿಗಳು ಅವರ ಆರೋಗ್ಯದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಗ್ರೇಟ್ ಖಲಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಗ್ರೇಟ್ ಖಲಿ, “ನಿನ್ನೆ ನನ್ನ ಕಾರು ಅಪಘಾತಕ್ಕೀಡಾಗಿತ್ತು. ಅಂದಿನಿಂದ ಅನೇಕರು ಕರೆ ಮಾಡಿ ನನ್ನ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ದೇವರ ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಂಪೂರ್ಣ ಕ್ಷೇಮವಾಗಿದ್ದೇನೆ, ಆತಂಕ ಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.
ಘಟನೆಯನ್ನು ಹೈಲೈಟ್ ಮಾಡದಿರುವ ಕುರಿತು ಸ್ಪಷ್ಟನೆ ನೀಡಿದ ಅವರು, “ಇದು ಸಣ್ಣ ಅಪಘಾತವಾಗಿದ್ದರಿಂದ ನಾನು ಯಾರೊಂದಿಗೂ ಹಂಚಿಕೊಳ್ಳಲು ಬಯಸಿರಲಿಲ್ಲ. ಆದರೆ, ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಾರಣ ನಾನೇ ಸ್ವತಃ ಸ್ಪಷ್ಟನೆ ನೀಡಬೇಕಾಯಿತು” ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವಾಹನದ ಮುಂಭಾಗ ಜಖಂಗೊಂಡಿರುವ ಬಿಳಿ ಬಣ್ಣದ ಕಾರನ್ನು ಕಾಣಬಹುದು. ಅಪಘಾತದ ನಂತರ ಗ್ರೇಟ್ ಖಲಿ ಅವರು ಅಲ್ಲಿಂದ ಮತ್ತೊಂದು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ತೆರಳುವುದು ದೃಶ್ಯದಲ್ಲಿದೆ. ಅದೃಷ್ಟವಶಾತ್ ಅವರು ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.





