July 20, 2026

ವಿಟ್ಲ: ಮಾಣಿ ಸಮೀಪ ಕಾರು ಅಪಘಾತ: ಸಮಯಪ್ರಜ್ಞೆಯಿಂದ ಜೀವ ಉಳಿಸಿದ ವಿಟ್ಲ ಎಸ್‌ಐ ರಾಮಕೃಷ್ಣ; ಮಾನವೀಯ ಪೊಲೀಸ್ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

0
image_editor_output_image-519801431-1784465586130

ವಿಟ್ಲ: ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ ವೇಳೆ ಬೆಳಕಿಗೆ ಬಂದಿದೆ.


ಸೂರಿಕುಮೇರ್ ಪೆಟ್ರೋಲ್ ಬಂಕ್ ಬಳಿಯ ಹೋಟೆಲ್ ಮುಂಭಾಗದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿತು. ಕಾರಿನೊಳಗೆ ಮಗು, ಮಹಿಳೆ ಹಾಗೂ ಚಾಲಕ ಸಿಲುಕಿಕೊಂಡಿದ್ದರು. ಕ್ಷಣಾರ್ಧದಲ್ಲಿ ನೆರವು ಸಿಗದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇತ್ತು.


ಅದೇ ಸಮಯದಲ್ಲಿ ಸಮೀಪದಲ್ಲೇ ಮತ್ತೊಂದು ಪ್ರಮುಖ ಪ್ರಕರಣದ ಸಂಬಂಧ ಕರ್ತವ್ಯ ನಿರ್ವಹಿಸುತ್ತಿದ್ದ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಅವರಿಗೆ ಅಪಘಾತದ ಭಾರೀ ಶಬ್ದ ಕೇಳಿಬಂದ ತಕ್ಷಣ ಯಾವುದೇ ಕ್ಷಣವನ್ನೂ ವ್ಯರ್ಥ ಮಾಡದೆ ಸ್ಥಳಕ್ಕೆ ಧಾವಿಸಿದರು.
ಪ್ರಾಣದ ಹಂಗು ತೊರೆದು ಕಾರಿನೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸುವಲ್ಲಿ ಎಸ್‌ಐ ರಾಮಕೃಷ್ಣ ಅವರು ಅಸಾಧಾರಣ ಸಮಯಪ್ರಜ್ಞೆ ಮತ್ತು ಧೈರ್ಯ ಪ್ರದರ್ಶಿಸಿದರು. ವಿಶೇಷವಾಗಿ ಅಳುತ್ತಿದ್ದ ಪುಟ್ಟ ಮಗುವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಅದನ್ನು ಕಂಡ ಸಾರ್ವಜನಿಕರು ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣದ ರಕ್ಷಣಾ ಕಾರ್ಯವೇ ಅವರ ಜೀವ ಉಳಿಯಲು ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಈ ಸಿಸಿ ಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಇಂತಹ ಅಧಿಕಾರಿಗಳೇ ಪೊಲೀಸ್ ಇಲಾಖೆಯ ಹೆಮ್ಮೆ”, “ಕರ್ತವ್ಯಕ್ಕಿಂತ ಮಾನವೀಯತೆಯನ್ನು ಮೊದಲಿಗಾಗಿಟ್ಟ ಅಧಿಕಾರಿ”, “ಸಮಯೋಚಿತ ಕಾರ್ಯದಿಂದ ಅಮೂಲ್ಯ ಜೀವಗಳನ್ನು ಉಳಿಸಿದ ನಿಜವಾದ ಜನಸೇವಕ” ಎಂಬ ಪ್ರಶಂಸೆಯ ಮಾತುಗಳು ವ್ಯಾಪಕವಾಗಿ ಹರಿದಾಡುತ್ತಿವೆ.


ಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಕರಣಾಕರ ಅವರ ಕರ್ತವ್ಯನಿಷ್ಠೆ, ಮಾನವೀಯತೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಪೊಲೀಸ್ ಇಲಾಖೆಯ ಮೇಲಿನ ಜನರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸಿದೆ.

Leave a Reply

Your email address will not be published. Required fields are marked *

error: Content is protected !!