ವಿಟ್ಲ: ಕೆಎಸ್‌ಆರ್‌ಟಿಸಿ ಬಸ್, ಟಿಪ್ಪರ್ ಲಾರಿ ಮುಖಾಮುಖಿ ಢಿಕ್ಕಿ
ವಿಟ್ಲ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಪ್ಪರ್ ಲಾರಿ ಮುಚ್ಚಿರಪದವು ಎಂಬಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಪಕಳಕುಂಜದಿಂದ ವಿಟ್ಲಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಪೆರುವಾಯಿ ಕಡೆ ಹೋಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದು, ಅಪಘಾತದಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಅಪಘಾತದ ನಂತರ ಬಸ್ ಚಾಲಕ ಮತ್ತು ಟಿಪ್ಪರ್ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಟಿಪ್ಪರ್ ಚಾಲಕ ಬಿಲಾಲ್ ಎಂಬಾತ ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪ್ರಶಾಂತ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಗಾಯಗೊಂಡ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪ್ರಶಾಂತ್, ವಿಟ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಚಾಲಕ ಅತೀವೇಗವಾಗಿ ಬಂದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೂ ಬಿಲಾಲ್ ಎಂಬಾತ ಹಲ್ಲೆ ನಡೆಸಿದ್ದಾನೆ.




