ಸುಳ್ಯ ನಗರ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಗಾಳಿ-ಮಳೆ: ಹಲವೆಡೆ ಹಾನಿ
ಸುಳ್ಯ: ಸುಳ್ಯ ನಗರ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗಾಳಿ-ಮಳೆಯಾಗಿದ್ದು ಹಲವೆಡೆ ಹಾನಿ ಸಂಭವಿಸಿದೆ.
ಸುಳ್ಯ ನಗರ, ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಬೆಳ್ಳಾರೆ, ಮಂಡೆಕೋಲು, ಅಜ್ಜಾವರ, ಎಲಿಮಲೆ, ದೊಡ್ಡತೋಟ, ಸೋಣಂಗೇರಿ, ಬೆಳ್ಳಾರೆ, ಪೆರುವಾಜೆ ಭಾಗದಲ್ಲಿ ಭಾರೀ ಗಾಳಿ-ಮಳೆಯಾಗಿದೆ. ಸಂಪಾಜೆಯ ಪೆಲ್ತಡ್ಕದ ಚಂದ್ರಾವತಿ ಹಾಗೂ ಗೂನಡ್ಕ ನಿವಾಸಿ ರಾಜ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಮನೆಯವರು ಪಾರಾಗಿದ್ದಾರೆ. ಎಲಿಮಲೆಯಲ್ಲಿ ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ತೆಂಗಿನ ಮರ ಮುರಿದು ಬಿದ್ದು ಹಾನಿಯಾಗಿದೆ. ಸುಳ್ಯದ ಗುರುಂಪು ನಿವಾಸಿ ಮುನೀರ್ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ.




