ಪಿಜಿಯಲ್ಲಿ ದೈಹಿಕ ಸಂಪರ್ಕಕ್ಕೆ ಒಪ್ಪದ ಯುವತಿಗೆ ಚೂರಿ ಇರಿತ: ಆರೋಪಿಯ ಬಂಧನ
ಬೆಂಗಳೂರು: ಕೊ ಲಿವಿಂಗ್ ಪಿಜಿಯಲ್ಲಿದ್ದ ಯುವತಿಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಆಕೆ ಒಪ್ಪದಿದ್ದಾಗ ಆಕೆಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಬಾಬುಗೆ ಮದುವೆಯಾಗಿ ಒಂದು ಮಗುವಿದ್ದರೂ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿರುವ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಇರುವಂತಹ (ಕೋ-ಲಿವಿಂಗ್) ಪಿಜಿಯಲ್ಲಿ ಒಬ್ಬನೇ ವಾಸವಿದ್ದನು. ಕಳೆದ ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಯುವತಿಯೊಬ್ಬಳು ಬಂದು ವಾಸವಾಗಿದ್ದಳು. ಅಕ್ಕ-ಪಕ್ಕದ ರೂಮು ಆಗಿರುವುದರಿಂದ ಹೊಸದಾಗಿ ಬಂದ ಯುವತಿ ಟೆಕ್ಕಿ ಬಾಬುಗೆ ಪರಿಚಯವಾಗಿದ್ದಳು. ಕಳೆದ ಮೂರು ತಿಂಗಳಿನಿಂದ 24 ವರ್ಷದ ಯುವತಿ ಜೊತೆ ವೈಟ್‌ಫೀಲ್ಡ್‌ನ ವೈಟ್‌ರೋಸ್ ಲೇಔಟ್‌ನಲ್ಲಿರುವ ಪ್ರೊ4, ಲಿವಿಂಗ್ ಟುಗೆದರ್ ಪಿಜಿ ವಸತಿ ಸೌಕರ್ಯದಲ್ಲಿ ವಾಸಿಸುತ್ತಿದ್ದ.
ಮೊನ್ನೆ ಸೆಪ್ಟೆಂಬರ್ 16 ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ, ಚೆನ್ನೂರು ಸಂತ್ರಸ್ತೆಯ ಕೋಣೆಯ ಬಾಗಿಲು ಬಡಿದು ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ. ಆಕೆ ತಾನು ಋತುಚಕ್ರದ ಸಮಯದಲ್ಲಿದ್ದೇನೆ ಎಂದು ಹೇಳಿದರೂ ಕೇಳದೆ ಕಿರುಕುಳ ನೀಡುತ್ತಲೇ ಇದ್ದನು. ಆಕೆ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಅವನು ಅವಳ ಬೆನ್ನಿನ ಎಡಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಆಕೆಗೆ ಗಾಯಗಳಾಗಿವೆ.
ನಂತರ ಅವನು ಅವಳನ್ನು ವಿವಸ್ತ್ರಗೊಳಿಸಿ, ಫೋಟೋಗಳನ್ನು ತೆಗೆದು 70,000 ರೂಪಾಯಿ ಕೊಡು ಇಲ್ಲದಿದ್ದರೆ ನಿನ್ನ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಈ ಘೋಟೋ, ವಿಡಿಯೊಗಳನ್ನು ಕಳುಹಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಸಂತ್ರಸ್ತೆ ಸ್ನೇಹಿತನಿಂದ ಹಣವನ್ನು ಸಾಲ ಪಡೆದು ನೀಡುವುದಾಗಿ ಹೇಳಿದಾಗ, ಆರೋಪಿ ಆಕೆಯ ಫೋನ್ ತೆಗೆದುಕೊಂಡು ಆನ್‌ಲೈನ್ ಪಾವತಿ ಮೂಲಕ 17,000 ರೂ.ಗಳನ್ನು ವರ್ಗಾಯಿಸಿಕೊಂಡು ಅದೇ ದಿನ ನಸುಕಿನ ಜಾವ ಸ್ಥಳದಿಂದ ಪರಾರಿಯಾಗಿದ್ದಾನೆ. ನಂತರ, ನಡೆದ ಘಟನೆಯನ್ನೆಲ್ಲಾ ಯುವತಿ ತನ್ನ ಸ್ನೇಹಿತರಿಗೆ ಕರೆ ಮಾಡಿ ಹೇಳಿದ್ದಾಳೆ. ಸ್ನೇಹಿತರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ-ಕಾನೂನು ಪ್ರಕರಣ (MLC) ವರದಿಯ ಆಧಾರದ ಮೇಲೆ, ಸಂತ್ರಸ್ತೆಯಿಂದ ದೂರು ದಾಖಲಿಸಿದ್ದಾರೆ.




