ಆಸ್ತಿಗಾಗಿ ಪುಟ್ಟ ಬಾಲಕಿಯನ್ನು 3ನೇ ಮಹಡಿಯಿಂದ ತಳ್ಳಿ ಕೊಂದ ಮಲತಾಯಿ
ಬೀದರ್: ಆಸ್ತಿಗಾಗಿ ಪುಟ್ಟ ಬಾಲಕಿಯನ್ನು ಮೂರನೆ ಮಹಡಿಯಿಂದ ಕೆಳಗೆ ತಳ್ಳಿ ಮಲತಾಯಿ ಕೊಲೆ ಮಾಡಿದ ಅಮಾನವೀಯ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು 7 ವರ್ಷದ ಸಾನ್ವಿ ಎಂದು ಗುರುತಿಸಲಾಗಿದೆ. ಆಕೆಯ ಮಲತಾಯಿ ರಾಧಾ ಬಾಲಕಿಗೆ ಆಟ ಆಡಿಸುವ ನೆಪದಲ್ಲಿ 3ನೇ ಮಹಡಿಗೆ ಕರೆದೊಯ್ದಿದ್ದಳು. ಈ ವೇಳೆ ಯಾರಿಗೂ ಕಾಣದಂತೆ ತಳ್ಳಿ ಕೊಲೆ ಮಾಡಿದ್ದಳು. ಆ ದಿನ ಎಲ್ಲರೂ ಸಾನ್ವಿ ಆಯತಪ್ಪಿ ಬಿದ್ದಳು ಎಂದು ನಂಬಿದ್ದರು. ಸೆಪ್ಟೆಂಬರ್ 12ರಂದು ಮೃತ ಬಾಲಕಿ ತಂದೆ ಸಿದ್ಧಾಂತಗೆ ಪಕ್ಕದ ಮನೆಯವರು ವಿಡಿಯೋವೊಂದನ್ನು ಕಳುಹಿಸಿದ್ದರು.
ವಿಡಿಯೋದಲ್ಲಿ ಬಾಲಕಿ ಸಾವನ್ನಪ್ಪಿದ ದಿನ ಆಕೆಯ ಜೊತೆ ಮಲತಾಯಿ ರಾಧಾ ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದೆ. ಈ ಸಿಸಿಟಿವಿ ದೃಶ್ಯ ನೋಡಿದಾಗ ವಿಷಯ ಬಹಿರಂಗವಾಗಿದ್ದು, ವಿಡಿಯೋ ಆಧರಿಸಿ ಬಾಲಕಿಯ ಅಜ್ಜಿ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಸಾನ್ವಿ ತಾಯಿ ಖಾಯಿಲೆಗೆ ತುತ್ತಾಗಿ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು.
ಬಳಿಕ 2023ರಲ್ಲಿ ರಾಧಾ ಜೊತೆ ಸಿದ್ಧಾಂತ ಎರಡನೇ ವಿವಾಹವಾಗಿದ್ದು, ಅವರಿಗೆ ಎರಡು ಅವಳಿ ಮಕ್ಕಳಿವೆ. ಹೀಗಾಗಿ ಸಿದ್ಧಾಂತನ ಮೊದಲ ಮಗುವನ್ನು ಎರಡನೇ ಪತ್ನಿ ರಾಧಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ.




