March 13, 2026

ಧರ್ಮಸ್ಥಳ: ಮೃತದೇಹ ಹೂತು ಹಾಕಿದ ಪ್ರಕರಣ: ದೂರುದಾರ ಗುರುತಿಸಿದ ಸ್ಥಳಗಳನ್ನು ಅಗೆಯಲು ಮುಂದಾದ ತಂಡ

0
IMG-20250729-WA0000.jpg

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧೆಡೆ ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೋರ್ವ ದೂರು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ಮುಂದುವರಿದಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ. ದೂರುದಾರನನ್ನೂ ಎಸ್ಐಟಿ ಸ್ಥಳಕ್ಕೆ ಕರೆತಂದಿದೆ.

ಸೋಮವಾರ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳಿಗೆ ಇಂದು ಮತ್ತೆ ಆಗಮಿಸಿರುವ ಎಸ್ಐಟಿ, ಗುರುತು ಮಾಡಿರುವ ಸ್ಥಳಗಳನ್ನು ಅಗೆಯಲು ಕಾರ್ಮಿಕರನ್ನು ಕರೆಸಿದೆ. ಈಗಾಗಲೇ ಕಾರ್ಮಿಕರು ಹಾರೆ, ಪಿಕ್ಕಾಸು ಸಹಿತ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು, ಅಗೆಯುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ.

ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ನೇತೃತ್ವದ ತಂಡವನ್ನು ಎಸ್.ಐ.ಟಿ ಸ್ಥಳಕ್ಕೆ ಕರೆಯಿಸಿದೆ.

ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪೊಲೀಸರು ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಲಾಗಿದೆ.

ಸೋಮವಾರ ಬೆಳಗ್ಗೆ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿರುವ 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳನ್ನು ಗುರುತು ಮಾಡಿ ಸುತ್ತ ಕೆಂಪು ರಿಬ್ಬನ್ ಗಳನ್ನು ಕಟ್ಟಲಾಗಿದೆ. ಆ ಸ್ಥಳಗಳಿಗೆ ರಾತ್ರಿ ವೇಳೆ ಪೊಲೀಸ್ ಗಸ್ತು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!