ಕಲ್ಲಡ್ಕದ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭ
ಬಂಟ್ವಾಳ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದ ಹಲವು ರೀತಿಯ ಟ್ರೋಲ್ ಜತೆಗೆ ಟೀಕೆಗೆ ಗುರಿಯಾಗಿದ್ದ ಕಲ್ಲಡ್ಕದಲ್ಲಿ ಇದೀಗ ಸರ್ವೀಸ್ ರಸ್ತೆಗೆ ಡಾಮರು ಹಾಕುವ ಕಾರ್ಯ ಆರಂಭಗೊಂಡಿದೆ. ಮಳೆ ದೂರವಾದ ಹಿನ್ನೆಲೆಯಲ್ಲಿ ಕಲ್ಲಡ್ಕದ ಪೂರ್ಲಿಪ್ಪಾಡಿ ಭಾಗದಿಂದ ಒಂದು ಬದಿಯಲ್ಲಿ ಡಾಮರು ಹಾಕಲಾಗುತ್ತಿದೆ.
ಕಳೆದ 2-3 ವರ್ಷಗಳಿಂದ ಹೆದ್ದಾರಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಕಲ್ಲಡ್ಕ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಲಾಗಿತ್ತು. ಮಳೆ ಬಂದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ಇತ್ತು. ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದು ಕಷ್ಟವಾಗಿರುವ ಜತೆಗೆ ಹೊಂಡಗಳು ಸೃಷ್ಟಿಯಾಗಿ ವಾಹನ ಸಾಗುವುದು ತೀರಾ ತ್ರಾಸದಾಯಕವಾಗಿತ್ತು. ಚರಂಡಿಗಳನ್ನು ಅಗೆದು ಮಣ್ಣು ತುಂಬಿರುವುದರಿಂದ ಮಳೆ ನೀರು ಬಂದರೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಹೀಗೆ ಎಲ್ಲ ರೀತಿಯಿಂದಲೂ ಬರೀ ಸಮಸ್ಯೆಗಳೇ ತುಂಬಿದ್ದವು.




