ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿ ಆತ್ಮಹತ್ಯೆಗೆ ಶರಣು
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ನೌಕರರ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಮುರುಘಾ ಮಠದ ಬಳಿ ನಡೆದಿದೆ.
ವಿಶ್ವವಿದ್ಯಾಲಯದ ಲೆಕ್ಕಪತ್ರ ವಿಭಾಗದ ಸೂಪರಿಂಟೆಂಡೆಂಟ್ ಚಂದ್ರಕಾಂತ್ ಸಾವಳಗಿ (55) ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾರೆ. ಶನಿವಾರ ಚುನಾವಣೆ ಫಲಿತಾಂಶ ಬಂದ ಮೇಲೆ ಮನೆಗೆ ವಾಪಸ್ ಆಗಿದ್ದ ಅವರು ಅದೇ ದಿನ ರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೂರ್ನಾಲ್ಕು ದಿನಗಳಿಂದ ಮನೆಯ ಬಾಗಿಲು ತೆರೆಯದ ಕಾರಣ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪೊಲೀಸರು ಬಂದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಚುನಾವಣೆಯಲ್ಲಿ ಸೋಲನುಭವಿಸಿದ್ದಕ್ಕೆ ಚಂದ್ರಕಾಂತ್ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.