ವಿಟ್ಲ: ಮುಸ್ಲಿಂ ಮಹಿಳೆಯರ ನಿಂದನೆ:
ಮುಸ್ಲಿಂ ಮುಖಂಡರಿಂದ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ದೂರು
ವಿಟ್ಲ: ಮುಸ್ಲಿಂ ಮಹಿಳೆಯರ ಬಗ್ಗೆ ಆಶ್ಲೀಲವಾಗಿ ಮಾತನಾಡಿ, ಮುಸ್ಲಿಂ ಸಮಾಜವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಟ್ಲ ಕಾಂಗ್ರೆಸ್ ಮುಸ್ಲಿಂ ಮುಖಂಡರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದರು.
ಕಾಂಗ್ರೆಸ್ ಮುಖಂಡ ಎಂ ಎಸ್ ಮಹಮ್ಮದ್ ನೇತೃತ್ವದ ಮುಸ್ಲಿಂ ಮುಖಂಡರ ನಿಯೋಗ ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಎಚ್ ಇ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಇತ್ತೀಚೆಗೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿ ಹನುಮಾನ್ ಜಯಂತಿ ಆಚರಣೆ ಸಮಯದಲ್ಲಿ ಅನಗತ್ಯವಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಸಮಾಜವನ್ನು ಹೀಯಾಳಿಸಿದ್ದಲ್ಲದೇ, ಮುಸ್ಲಿಂ ಮಹಿಳೆಯರನ್ನು ನಿಂದಿಸಿದ್ದಾರೆ. ಇದರಿಂದ ಧರ್ಮ ಧರ್ಮದ ನಡುವೆ ವೈಷಮ್ಯ ಹರಡುವ ಸಂಚಿನ ಭಾಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಡೆ, ವಿಕೆಎಂ ಅಶ್ರಫ್, ಪ್ರಮುಖರಾದ ಮೊಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಬ್ದುಲ್ ಕರೀಮ್ ಕುದ್ದುಪದವು, ಶಮೀರ್ ಪಳಿಕೆ, ಅಬ್ದುಲ್ ಕುಂಞ ಕೊಡಂಗಾಯಿ, ಶೇಕ್ ಅಲಿ ಸೇರಾಜೆ, ಅಬ್ದುಲ್ ರಹಿಮಾನ್ ಕುರುಂಬಳ, ಅಬ್ದುಲ್ ಮಜೀದ್ ಕನ್ಯಾನ, ಉಮ್ಮರ್ ಕೆ, ಎಸ್ ಕೆ ಮೊಹಮ್ಮದ್ ಉಪಸ್ಥಿತರಿದ್ದರು.