ಉಡುಪಿ: ವಿವಿಧ ವ್ಯಕ್ತಿಗಳಿಂದ ಕಳವಾದ 3.5 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಪತ್ತೆ
ಉಡುಪಿ: ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023 ಜನವರಿಯಿಂದ ಇದುವರೆಗಿನ 11 ತಿಂಗಳ ಅವಧಿಯಲ್ಲಿ ವಿವಿಧ ವ್ಯಕ್ತಿಗಳಿಂದ ಕಳವಾದ 3.5 ಲಕ್ಷ ರೂಪಾಯಿ ಮೌಲ್ಯದ 18 ಮೊಬೈಲ್ ಫೋನ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅವುಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರಿಗೆ ಉಡುಪಿ ಜಿಲ್ಲಾ ಅಡೀಶನಲ್ ಎಸ್.ಪಿ. ಸಿದ್ಧಲಿಂಗಪ್ಪ ಟಿ. ಅವರು ಮಣಿಪಾಲ ಠಾಣೆಯಲ್ಲಿ ಹಸ್ತಾಂತರಿಸಿದರು.
ಮಣಿಪಾಲ ಸಮೀಪದ ಈಶ್ವರ ನಗರದ ದಿಯಾಂಜಲಿ ಎಂಬವರು ಕಳೆದ ನ. 5 ರಂದು ತನ್ನ 15 ಸಾವಿರ ರೂಪಾಯಿ ಮೌಲ್ಯದ ವನ್ ಪ್ಲಸ್ 7 ಮೊಬೈಲ್ ಹಾಗೂ ನವೆಂಬರ್ 27 ರಂದು ತನ್ನ ಸ್ನೇಹಿತೆಯ 20 ಸಾವಿರ ರೂಪಾಯಿ ಮೌಲ್ಯದ ರೆಡ್ ಮಿ ನೋಟ್ 10 ಪ್ರೊ ಮ್ಯಾಕ್ಸ್ ಮೊಬೈಲ್ ಫೋನ್ ಕಳವಾದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಗೆ ಡಿ. 16 ರಂದು ದೂರು ನೀಡಿದ್ದರು.
ಈ ಬಗ್ಗೆ ತನಿಖೆಯನ್ನು ಕೈಗೆತ್ತಿಕೊಂಡ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ದೇವರಾಜ ಟಿ.ವಿ. ನೇತೃತ್ವದ ಪೊಲೀಸರು ಕಳವಾದ ಮೊಬೈಲ್ ಫೋನ್‌ಗಳ ಬಗ್ಗೆ ಸಿಇಐಆರ್ ಪೋರ್ಟಲ್ ನಲ್ಲಿ ನಮೂದಿಸಿದ್ದರು.
ಸಿಇಐಆರ್ ಪೋರ್ಟಲ್ ಪರಿಶೀಲಿಸಿದಾಗ ಕಳವಾದ ಮೊಬೈಲ್ ಫೋನ್ ಗಳನ್ನು ಆರೂರು ಗ್ರಾಮದ ದೀಕ್ಷಿತ್ (27) ಎಂಬಾತ ಬಳಕೆ ಮಾಡುತ್ತಿರುವುದು ಕಂಡು ಬಂದಿತ್ತು. ಪೊಲೀಸರು ಆತನನ್ನು ಬಂಧಿಸಿದ್ದು, ಬಳಿಕ ಆತ ಬೇರೆ ಬೇರೆ ಕಡೆಗಳಲ್ಲಿ ಕಳವು ಮಾಡಿದ 6 ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಂಡಿದ್ದರು. ಆತನನ್ನು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ 6 ಮೊಬೈಲ್ ಫೋನ್‌ಗಳನ್ನು ಮತ್ತು ಪೊಲೀಸರು ಈ ಹಿಂದೆ ವಿವಿಧ ಕಳವು ಪ್ರಕರಣಗಳಲ್ಲಿ ಪತ್ತೆ ಹಚ್ಚಿದ್ದ 12 ಮೊಬೈಲ್ ಸೇರಿದಂತೆ ಒಟ್ಟು 18 ಮೊಬೈಲ್ ಫೋನ್ ಗಳನ್ನು ನಿನ್ನೆ ಉಡುಪಿ ಜಿಲ್ಲಾ ಅಡೀಶನಲ್ ಎಸ್.ಪಿ. ಸಿದ್ಧಲಿಂಗಪ್ಪ ಟಿ. ಅವರು ಮಣಿಪಾಲ ಠಾಣೆಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಿದರು.
ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್ ಬಗ್ಗೆ ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟ್ರಾರ್ – ಸಿಇಐಆರ್ ಪೋರ್ಟಲ್ ನಲ್ಲಿ ನಮೂದಿಸಿದ್ದಲ್ಲಿ ಪೊಲೀಸರಿಗೆ ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.




