ವಿಟ್ಲ: ಡಿ. 7ರಿಂದ ವಿಟ್ಲದಲ್ಲಿ , ಸ್ಕೌಟ್ಸ್ – ಗೈಡ್ಸ್ ಮೇಳ, ರೋವರ್ಸ್ – ರೇಂಜರ್ಸ್ ಸಮಾಗಮ ಜಿಲ್ಲಾ ಕ್ಯಾಂಪೋರಿ
ವಿಟ್ಲ: ದ.ಕ. ಜಿಲ್ಲಾ ಪಂಚಾಯಿತಿ ಶಾಲಾ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಮತ್ತು ವಿಟ್ಲ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಕಬ್ಸ್ -ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್ – ಗೈಡ್ಸ್ ಮೇಳ, ರೋವರ್ಸ್ – ರೇಂಜರ್ಸ್ ಸಮಾಗಮ ಜಿಲ್ಲಾ ಕ್ಯಾಂಪೋರಿ 2023-24 ಡಿ.7ರಿಂದ 10ವರೆಗೆ ವಿಟ್ಲ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೋವರ್ಸ್ – ರೇಂಜರ್ಸ್ ಸಮಾಗಮ ಡಿ.7ರಂದು ಸಾಯಂಕಾಲ 6ಗಂಟೆಗೆ ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಸ್ಕೌಟ್ಸ್ – ಗೈಡ್ಸ್ ಮೇಳವನ್ನು ಡಿ.8ರಂದು ಸಾಯಂಕಾಲ 5.45ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಡೆಸಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಬ್ಸ್ -ಬುಲ್ ಬುಲ್ಸ್ ಉತ್ಸವ ಡಿ.9ರಂದು ಬೆಳಗ್ಗೆ 10,30ಕ್ಕೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಶೋಕಮಾತೆ ಇಗರ್ಜಿ ಧರ್ಮಗುರುಗಳಾದ ಐವನ್ ಮೈಕಲ್ ರೋಡ್ರಿಗಸ್, ಕೇಂದ್ರ ಜುಮ್ಮಾ ಮಸೀದಿ ಧರ್ಮಗುರುಗಳಾದ ಮುಹಮ್ಮದ್ ನಸೀಹ್ ದಾರಿಮಿ ಘನ ಉಪಸ್ಥಿತರಿರಲಿದ್ದಾರೆ.
ಸಾಯಂಕಾಲ 5.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಭಾಗವಹಿಸಲಿದ್ದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ವಾಗತ ಸಮಿತಿಯ ಕಾರ್ಯದರ್ಶಿ ಪ್ರದೀಪ್ ಮಾತನಾಡಿ ಕಾರ್ಯಕ್ರಮದಲ್ಲಿ ಕಬ್ 87, ಬುಲ್ ಬುಲ್ 99, ಸ್ಕೌಟ್ 766, ಗೈಡ್ 743, ರೋವರ್ 89, ರೇಂಜರ್ 116, ಕಬ್ ಮಾಸ್ಟರ್ 12, ಫ್ಲಾಕ್ ಲೀಡರ್ 17, ಸ್ಕೌಟ್ ಮಾಸ್ಟರ್ 36, ಗೈಡ್ ಕ್ಯಾಪ್ಟನ್ 53, ಸರ್ವೀಸ್ ರೋವರ್ 109, ಸರ್ವೀಸ್ ರೇಂಜರ್ 48, ಸ್ಕೌಟ್ ವಿಭಾಗದ ಸ್ಟಾಫ್ 28, ಗೈಡ್ ವಿಭಾಗದ ಸ್ಟಾಫ್ 19 ಸೇರಿ ಒಟ್ಟು 2222 ಮಂದಿ ಭಾಗವಹಿಸಲಿದ್ದಾರೆ. ಸಾಹಸಮಯ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಲೋಕ, ಜಾನಪದಲೋಕ, ಕೃಷಿಲೋಕ, ವಿಜ್ಞಾನಲೋಕ ಸೇರಿ ಆರು ಮೇಳಗಳು ಮತ್ತು ನಗರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 20ರಿಂದ 25ಲಕ್ಷ ಖರ್ಚಾಗುವ ಸಾಧ್ಯತೆ ಇದ್ದು, ಇದಕ್ಕೆ ಸರ್ಕಾರದಿಂದ ಯಾವುದೇ ಅನುದಾನಗಳೂ ಬರುವುದಿಲ್ಲ. ಜಿಲ್ಲಾ ಸಂಸ್ಥೆಯಿಂದ 1ಲಕ್ಷ ಬರಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ 250ರೂ. ಮೌಲ್ಯದ ಕಿಟ್ ನೀಡಲಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪ್ರತಿನಿಧಿ ನಾರಾಯಣ ನಾಯಕ್, ಸ್ವಾಗತ ಸಮಿತಿ ಕೋಶಾಧಿಕಾರಿ ವಿಶ್ವನಾಥ ಗೌಡ ಕುಳಾಲು ಉಪಸ್ಥಿತರಿದ್ದರು.





