ಬಂಟ್ವಾಳ: ಕ್ರಿಕೆಟ್ ಆಡಲು ಹೋದ ಯುವಕ ನಿಗೂಢ ರೀತಿಯಲ್ಲಿ ನಾಪತ್ತೆ
ಬಂಟ್ವಾಳ: ಕ್ರಿಕೆಟ್ ಆಟ ಆಡಲು ಹೋಗಿರುವ ವ್ಯಕ್ತಿಯೋರ್ವರು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.
ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮಹಮ್ಮದ್ ಫಾರೂಕ್ ಕಾಣೆಯಾದ ವ್ಯಕ್ತಿ.
ನ.28 ರಂದು ಆದಿತ್ಯವಾರ ಬೆಳಿಗ್ಗೆ 7.30 ಗಂಟೆಗೆ ಮನೆಯಿಂದ ಕ್ರಿಕೆಟ್ ಆಟ ಆಡಿ ಬರುತ್ತೇನೆಂದು ಮನೆಯಿಂದ ಹೋದವರು ಅ ಬಳಿಕ ಮನೆಗೆ ವಾಪಸು ಬಂದಿಲ್ಲ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಅ ಬಳಿಕ ಪೋನ್ ಸ್ವಿಚ್ ಆಪ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಇದೇ ಫಾರೂಕ್ ವಿರುದ್ಧ ಕಾಸರಗೋಡು ಸುಲ್ತಾನ್ ಗೋಲ್ಢ್ ಜುವೆಲ್ಲರಿ ಆಡಳಿತ ಮಂಡಳಿಯವರು ಚಿನ್ನಾಭರಣ ಜತೆ ಪರಾರಿಯಾಗಿದ್ದು, ಆತನನ್ನು ಪತ್ತೆ ಹಚ್ಚುವಂತೆ ಭಿತ್ತಿ ಪತ್ರ ಅಳವಡಿಸಿದ್ದಾರೆ.
ಜ್ಯುವೆಲ್ಲರಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಫಾರೂಕ್, ಅಂಗಡಿಯಲ್ಲಿದ್ದ ಸುಮಾರು 2.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾನೆ. ಜ್ಯುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಮತ್ತು ವಜ್ರಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಜ್ಯುವೆಲ್ಲರಿ ಮಾಲೀಕರು ಕಳೆದುಹೋದ ಚಿನ್ನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ.