ತಮ್ಮ ಷರತ್ತನ್ನು ಒಪ್ಪಿಕೊಳ್ಳುವ ಪಕ್ಷದೊಂದಿಗೆ JDS ಮೈತ್ರಿ: ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಕೆಲವು ಮತಗಟ್ಟೆ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಬಹುದು ಎಂದು ಅಂದಾಜಿಸಿದ ಬೆನ್ನಲ್ಲೇ, ತಮ್ಮ ಷರತ್ತನ್ನು ಒಪ್ಪಿಕೊಳ್ಳುವ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು 10 ಸಂಸ್ಥೆಗಳು ಪ್ರಕಟಿಸಿರುವ ಮತದಾನೋತ್ತರ ಸಮೀಕ್ಷೆಯಲ್ಲಿ ಹೇಳಿವೆ.
ಸಿಂಗಾಪುರಕ್ಕೆ ತೆರಳುವುದಕ್ಕೂ ಮುನ್ನ ಮಾತನಾಡಿದ ಅವರು, ‘50 ಸೀಟುಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಇದೆ. ಈ ಬಾರಿ ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವ ಪಕ್ಷದ ಜತೆ ಹೋಗುತ್ತೇವೆ‘ ಎಂದು ಹೇಳಿದರು.
ಕುಮಾರಸ್ವಾಮಿ ಈಗಾಗಲೇ 2006ರಲ್ಲಿ ಬಿಜೆಪಿ ಹಾಗೂ 2018ರಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.




