ತಾಂತ್ರಿಕ ದೋಷ ಹಿನ್ನೆಲೆ: ಅಮೆರಿಕದ ಎಲ್ಲಾ ವಿಮಾನಗಳು ಹಾರಾಟ ಸ್ಥಗಿತ
ವಾಷಿಂಗ್ಟನ್: ಕಾರ್ಯಾಚರಣೆ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅಮೆರಿಕದ ಎಲ್ಲ ವಿಮಾನಗಳು ಹಾರಾಟ ಸ್ಥಗಿತಗೊಳಿಸಿ ಕೆಳಗಿಳಿದಿವೆ.
ತಾಂತ್ರಿಕ ದೋಷದ ಕುರಿತಂತೆ ಫೆಡರಲ್ ವೈಮಾನಿಕ ಆಡಳಿತ(ಎಫ್‌ಎಎ) ಮಾಹಿತಿ ನೀಡಿರುವುದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ಕಾರ್ಯಾಚರಣೆಗಳಲ್ಲಿ ತೊಡಗಿರುವವರಿಗೆ ಸೂಚನೆಗಳನ್ನು ಒಳಗೊಂಡಿರುವ ತನ್ನ ನೋಟಿಸ್ ಟು ಏರ್ ಮಿಷನ್ಸ್ (ಎನ್‌ಒಟಿಎಎಂ) ವ್ಯವಸ್ಥೆಯು ಬುಧವಾರ ಬೆಳಿಗ್ಗೆ ವಿಫಲವಾಗಿದೆ ಎಂದು ಎಫ್‌ಎಎ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ನೋಟಿಸ್ ಟು ಏರ್ ಮಿಷನ್ಸ್ (ಎನ್‌ಒಟಿಎಎಂ) ವ್ಯವಸ್ಥೆಯನ್ನು ಮರುಸ್ಥಾಪಿಸಲು ಎಫ್‌ಎಎ ಕೆಲಸ ಮಾಡುತ್ತಿದೆ. ಅಂತಿಮ ದೃಢೀಕರಣ ಪರೀಕ್ಷೆ ಮತ್ತು ಸಿಸ್ಟಂ ರೀಲೋಡಿಂಗ್ ಮಾಡುತ್ತಿದ್ದೇವೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಎಫ್‌ಎಎ ಟ್ವೀಟ್ ಮೂಲಕ ತಿಳಿಸಿದೆ. ಇದರಿಂದಾಗಿ ದೇಶದಾದ್ಯಂತ ವಾಯುಯಾನ ವ್ಯವಸ್ಥೆಯಲ್ಲಿ ಏರುಪೇರಾಗಿದ್ದು, ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ವಿಮಾನಗಳ ವಿಳಂಬದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.




