March 19, 2026

ಕುಂದಾಪುರ: ದ್ವಿಚಕ್ರ ವಾಹನಕ್ಕೆ ಕ್ರೇನ್ ಢಿಕ್ಕಿ : ಸಹಸವಾರ ಮೃತ್ಯು

0
IMG-20221227-WA0015.jpg

ಕುಂದಾಪುರ: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಪಾನಕದಕಟ್ಟೆ ಎಂಬಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕ್ರೇನ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನನಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ತಾಲೂಕಿನ ಹುಣಸೆಮಕ್ಕಿ ಸಮೀಪದ ಹೊಂಬಾಡಿ ನಿವಾಸಿ ಪ್ರಶಾಂತ್ ಮೊಗವೀರ (31) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಪ್ರಶಾಂತ್ ಅವರು ದಿನೇಶ್ ಪೂಜಾರಿ ಎಂಬವರ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ತೆರಳುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಹೊಸ ಕ್ರೇನ್ ಯೊಂದು ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಪರಿಣಾಮ ದ್ವಿಚಕ್ರ ವಾಹನ ಸಮೇತ ಇಬ್ಬರು ಸವಾರರು ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ದಿನೇಶ್ ಪೂಜಾರಿ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಯಾದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಕ್ರೇನ್ ಅನ್ನು ಸ್ಥಳದಲ್ಲಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!