ರೇಡಿಯೋ ಜಾಕಿ ಆರ್ ಜೆ ರಚನಾ ಹೃದಯಾಘಾತದಿಂದ ನಿಧನ, ಅಂಗಾಂಗ ದಾನ
ಬೆಂಗಳೂರು: ಖ್ಯಾತ ರೇಡಿಯೋ ಜಾಕಿ ಆರ್ ಜೆ ರಚನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ರೇಡಿಯೋ ಸಂಸ್ಥೆಯಲ್ಲಿ ಆರ್ ಜೆಯಾಗಿ ಕಾರ್ಯ ನಿರ್ವಹಿಸಿ ಸಾಕಷ್ಟು ಖ್ಯಾತಿ ಗಳಿಸಿದ್ದ ಆರ್ ಜೆ ರಚನಾ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲಗಳ ಪ್ರಕಾರ ಜೆ.ಪಿ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಅವರಿಗೆ ಕಾರ್ಡಿಯಾಕ್ ಅರೆಸ್ಟ್ (ಹೃದಯಾಘಾತ)ಆಗಿದೆ ಎನ್ನಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅವರು ನಿಧನರಾಗಿದ್ದಾರೆ. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಅಂಗಾಂಗ ದಾನ
ಇನ್ನು ಆರ್ ಜೆ ರಚನಾ ಅವರ ಆಸೆಯಂತೆ ಅವರ ಕುಟುಂಬಸ್ಥರು ಆಕೆಯ ದೇಹದ ಅಂಗಾಂಗ ದಾನಕ್ಕೆ ಮುಂದಾಗಿದ್ದು, ಆ ಮೂಲಕ ಆರ್ ಜೆ ರಚನಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕುಟುಂಬಸ್ಥರು ರಚನಾ ಅವರ ಅಂಗಾಂಗವನ್ನು ದಾನ ಮಾಡಿದ್ದಾರೆ. ಮುಂಜಾನೆ ಹೃದಯಘಾತವಾಗಿದ್ದ ಕಾರಣ ಅಪೋಲೊ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.




