ಈ ವರ್ಷ ಕೊರೋನಾ ಪಾಸ್ ಇಲ್ಲ, ಎಸೆಸೆಲ್ಸಿ ಪರೀಕ್ಷೆಗೆ ಇದೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷ ಕೊರೋನಾ ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಎಸ್ಎಸ್ಎಲ್’ಸಿ ಪರೀಕ್ಷೆಗೆ ಹಾಜರಾಗುತ್ತಾರೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶುಕ್ರವಾರ ಹೇಳಿದ್ದಾರೆ.
ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೆ ಉತ್ತೀರ್ಣರಾದ ಬಗ್ಗೆ ಉಲ್ಲೇಖಿಸಿ ಪ್ರತಿಕ್ರಿಯೆ ನೀಡಿರುವ ಸಚಿವರು, 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ ಸಮಸ್ಯೆ ವಿಭಿನ್ನವಾಗಿತ್ತು. ಕಳೆದ ವರ್ಷ ನೀಡಿದ್ದ ಸೌಲಭ್ಯ, ವ್ಯವಸ್ಥೆಯನ್ನೇ ಈ ಬಾರಿಯೂ ವಿಸ್ತರಿಸಿದರೆ, ವಿದ್ಯಾರ್ಥಿಗಳು ಓದುವುದನ್ನೇ ಮರೆತು ಬಿಡುತ್ತಾರೆ. ಇದರಿಂದ ಕೆಟ್ಟ ಪ್ರವೃತ್ತಿಯೊಂದನ್ನು ಬೆಳೆಸಿದಂತಾಗುತ್ತದೆ ಎಂದು ಹೇಳಿದ್ದಾರೆ.




