November 16, 2026

ಕುಂದಾಪುರ: ಕೆರೆಯಲ್ಲಿ  ಈಜಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತ್ಯು

0
image_editor_output_image-405135917-1794798832882

ಕುಂದಾಪುರ: ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನದ ಸಮೀಪವಿರುವ ವರುಣತೀರ್ಥ ಕೆರೆಯಲ್ಲಿ ಶನಿವಾರ ಬೆಳಗ್ಗೆ ಈಜಲು ತೆರಳಿದ್ದ 38 ವರ್ಷದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಗದಗ ಜಿಲ್ಲೆ ಮೂಲದ ನಾಗರಾಜ್ ಎಂದು ಗುರುತಿಸಲಾಗಿದೆ. ಇವರು ಪ್ರಸ್ತುತ ಸಾಸ್ತಾನದ ಗುಂಡ್ಮಿಯ ಮಡಿವಾಳ ಕೇರಿಯ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಮೂಲಗಳ ಪ್ರಕಾರ, ನಾಗರಾಜ್ ಮತ್ತು ಅವರ ಸ್ನೇಹಿತ ರಾಹುಲ್ ಶನಿವಾರ ಬೆಳಗ್ಗೆ ಕೋಟದ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನದ ಬಳಿಕ ನಾಗರಾಜ್ ದೇವಸ್ಥಾನದ ಬಳಿಯಿರುವ ವರುಣತೀರ್ಥ ಕೆರೆಗೆ ಈಜಲು ಇಳಿದಿದ್ದಾರೆ. ರಾಹುಲ್‌ಗೆ ಈಜು ಬಾರದ ಕಾರಣ ಅವರು ಕೆರೆಯ ದಡದಲ್ಲೇ ನಿಂತಿದ್ದರು.

ಈಜುತ್ತಿದ್ದ ನಾಗರಾಜ್, ಕೆರೆಯ ಮಧ್ಯಭಾಗದಲ್ಲಿರುವ ಶಿವಲಿಂಗವನ್ನು ಮುಟ್ಟಿ ವಾಪಸ್ ಬರುವುದಾಗಿ ತನ್ನ ಸ್ನೇಹಿತನಿಗೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಆಳವಿದ್ದ ಕೆರೆಯ ಮಧ್ಯಭಾಗಕ್ಕೆ ಈಜಿಕೊಂಡು ಹೋದಾಗ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾರೆ.

ನಾಗರಾಜ್ ಮುಳುಗುತ್ತಿರುವುದನ್ನು ಕಂಡು ಗಾಬರಿಗೊಂಡ ರಾಹುಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿ ಹುಡುಕಾಟ ನಡೆಸಿದರಾದರೂ, ಅಷ್ಟರಲ್ಲಾಗಲೇ ನಾಗರಾಜ್ ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಲಾಯಿತು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಯಲ್ಲಿ ನೆರವಾದರು.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!