ಬೋಳಿಯಾರ್ ಡಬಲ್ ಮರ್ಡರ್ ಪ್ರಕರಣ: ಪ್ರಮುಖ ಆರೋಪಿ ಹಫೀಝ್ ಗೆ ನ್ಯಾಯಾಂಗ ಬಂಧನ
ಮಂಗಳೂರು: ಬೋಳಿಯಾರ್ ಸಮೀಪದ ಕುರ್ನಾಡು ಪಡೀಲ್ ಪೆಟ್ರೋಲ್ ಪಂಪ್ ಬಳಿ ಅಕ್ಟೋಬರ್ 19ರಂದು ಸ್ಕೂಟರ್‌ಗೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿ ಇಬ್ಬರು ಯುವಕರನ್ನು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೋಳಿಯಾರ್ ಗ್ರಾಮದ ನಿವಾಸಿ ಹಫೀಝ್ ಯಾನೆ ಅಪ್ಪಿ ಬಂಧಿತ ಪಿಕಪ್ ಚಾಲಕ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಕಿನ್ಯಾ ಅರಬಿ ನಗರದ ಮುಹಮ್ಮದ್ ಅರ್ಫಾಝ್ ಹಾಗೂ ಕಿನ್ಯಾ ಉಕ್ಕುಡದ ಮುಹಮ್ಮದ್ ಜುನೈದ್ ದಾರುಣವಾಗಿ ಮೃತಪಟ್ಟಿದ್ದರು.
ಅಕ್ಟೋಬರ್ 19ರಂದು ಯುವಕರು ತೆರಳುತ್ತಿದ್ದ ಸ್ಕೂಟರ್‌ಗೆ ಪಿಕಪ್ ವಾಹನದಿಂದ ಹಿಂಬದಿಯಿಂದ ಭೀಕರವಾಗಿ ಢಿಕ್ಕಿ ಹೊಡೆಸಲಾಗಿತ್ತು. ಈ ಕೃತ್ಯದಲ್ಲಿ ಅರ್ಫಾಝ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಜುನೈದ್ ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುನೈದ್ ಕೂಡ ಕೊನೆಯುಸಿರೆಳೆದಿದ್ದರು.
ಆರಂಭದಲ್ಲಿ ಇದು ಕೇವಲ ರಸ್ತೆ ಅಪಘಾತ ಎಂದು ಭಾವಿಸಲಾಗಿದ್ದು, ನಂತರ ಪೊಲೀಸರ ತನಿಖೆಯ ವೇಳೆ ಇದೊಂದು ಪೂರ್ವಪರ ವೈಷಮ್ಯದಿಂದ ನಡೆದ ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗಗೊಂಡಿತ್ತು.
ಕೂಡಲೇ ಎಚ್ಚೆತ್ತ ಕೊಣಾಜೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹಫೀಝ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




