October 21, 2026

ಹಬ್ಬದ ದಿನವೇ ಭಾರಿ ದುರಂತ: ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ  ಬಾಲಕ ಮೃತ್ಯು

0
image_editor_output_image-152810106-1792567975698

ಮಂಡ್ಯ: ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಹಬ್ಬದ ದಿನವೇ ಭಾರಿ ದುರಂತ ಸಂಭವಿಸಿದ್ದು, ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಮುದ್ದು ಬಾಲಕ ದಾರುಣವಾಗಿ ಮೃತಪಟ್ಟಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಂಪತ್ ಎಂಬುವವರ ಪುತ್ರ ಕಂದನ್ ಎಸ್. ಗೌಡ (3) ಮೃತಪಟ್ಟ ಬಾಲಕ.


ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದ ನಿವಾಸಿ ಸಂಪತ್ ಅವರ ಕುಟುಂಬಸ್ಥರು ಆಯುಧ ಪೂಜೆಯ ಪ್ರಯುಕ್ತ ತಮ್ಮ ಮನೆಯ ವಾಹನಗಳಿಗೆ ಅತ್ಯಂತ ಸಂಭ್ರಮದಿಂದ ಪೂಜೆ ಸಲ್ಲಿಸಿದ್ದರು. ಪೂಜಾ ಕಾರ್ಯಕ್ರಮಗಳೆಲ್ಲ ಮುಗಿದ ಬಳಿಕ, ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರನ್ನು ಬೇರೆ ಕಡೆ ಸರಿಯಾಗಿ ಪಾರ್ಕ್ ಮಾಡಲು ಸಂಪತ್ ಅವರ ಭಾವಮೈದ ಸಂಜಯ್ ಎಂಬುವವರು ಕಾರು ಹತ್ತಿ ಚಾಲನೆ ಮಾಡಲು ಮುಂದಾಗಿದ್ದಾರೆ.

ಇದೇ ವೇಳೆ ಕಾರು ಚಲಿಸುವುದನ್ನು ಗಮನಿಸಿದ ಸಂಪತ್ ಅವರ 3 ವರ್ಷದ ಮಗು ಕಂದನ್, ಕಾರು ಹತ್ತಲು ಓಡೋಡಿ ಬಂದಿದ್ದಾನೆ. ಆದರೆ ಮಗು ಹತ್ತಿರ ಬರುವುದನ್ನು ಗಮನಿಸದ ಚಾಲಕ ಸಂಜಯ್, ದಿಢೀರನೆ ಕಾರನ್ನು ಮುಂದೆ ಚಲಾಯಿಸಿದ್ದಾರೆ. ಈ ವೇಳೆ ಕಾರಿನ ಭಾರಿ ಚಕ್ರಕ್ಕೆ ಸಿಲುಕಿದ ಬಾಲಕ ಕಂದನ್ ತೀವ್ರ ರಕ್ತಸ್ರಾವಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಕಂಡು ಬೆಚ್ಚಿಬಿದ್ದ ಕುಟುಂಬಸ್ಥರು ತಕ್ಷಣವೇ ಮದ್ದೂರು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಕಂದನ್ ಆಸ್ಪತ್ರೆಗೆ ತಲುಪುವ ಮುನ್ನವೇ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ. ಕಂದಮ್ಮನನ್ನು ಕಳೆದುಕೊಂಡ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!