ರಿಂಗ್ ರೋಡ್ ಶುಭಾ ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ಸರ್ಕಾರ
ಬೆಂಗಳೂರು: ಭಾವಿ ಪತಿ ಎಂಜಿನಿಯರ್ ಬಿ.ವಿ.ಗಿರೀಶ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶುಭಾ ಶಂಕರ್ ಮತ್ತು ಡಿ.ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ಸಚಿವ ಸಂಪುಟ ಸಭೆ ತಿರಸ್ಕರಿಸಿದೆ. ಕಾನೂನು ಚೌಕಟ್ಟಿನಲ್ಲಿ ಅವಕಾಶವಿಲ್ಲದ ಕಾರಣ ರಾಜ್ಯಪಾಲರಿಗೆ ಅರ್ಜಿ ತಿರಸ್ಕರಿಸಲು ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
2003ರ ಡಿಸೆಂಬರ್ನಲ್ಲಿ ನಿಶ್ಚಿತಾರ್ಥವಾಗಿದ್ದ ಸಾಫ್ಟ್ವೇರ್ ಎಂಜಿನಿಯರ್ ಗಿರೀಶ್ ಅವರನ್ನು ಪ್ರಿಯತಮೆ ಶುಭಾ ಶಂಕರ್ ಊಟಕ್ಕೆಂದು ಕರೆದೊಯ್ದಿದ್ದಳು. ಈ ವೇಳೆ ವಿಮಾನ ಇಳಿಯುವುದನ್ನು ನೋಡೋಣವೆಂದು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣ ರಸ್ತೆಯ ರಿಂಗ್ ರೋಡ್ ಸಮೀಪ ಕರೆತಂದು, ಅಲ್ಲಿ ಪ್ರಿಯಕರ ಅರುಣ್ ವರ್ಮಾ ಹಾಗೂ ಸಹಚರರ ಮೂಲಕ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿಸಿದ್ದಳು. ಈ ಪ್ರಕರಣದಲ್ಲಿ 2010ರಲ್ಲಿ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು.



