ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕಿ ಭಾಗಿ: ಎಚ್ಡಿಕೆ ಗಂಭೀರ ಆರೋಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರ ನೇರ ಕೈವಾಡವಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಉಲ್ಲೇಖಿಸಿ, ಈ ಸ್ಟಿಂಗ್ ಆಪರೇಷನ್ ಜಾಲದಲ್ಲಿ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ. ಕುಮಾರಸ್ವಾಮಿ, ಗೃಹ ಸಚಿವರ ವಿರುದ್ಧ ಕಟು ಶಬ್ದಗಳಲ್ಲಿ ಕಿಡಿಕಾರಿದರು. “ಗೃಹ ಸಚಿವರೇ, ಅಧಿಕಾರ ಇದೆ ಅಂತ ಏನು ಬೇಕಾದರೂ ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಪಕ್ಷದ ಕಾರ್ಯಕರ್ತರನ್ನು ಅರೆಸ್ಟ್ ಮಾಡುತ್ತೀರಾ? ನಾನೇ ಈಗ ನಿಮ್ಮ ಕಚೇರಿಗೆ ಬರ್ತೀನಿ, ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಿ” ಎಂದು ನೇರ ಸವಾಲು ಎಸೆದರು.
ಮುಂದುವರಿದು ಮಾತನಾಡುತ್ತಾ, “ಕುಮಾರಸ್ವಾಮಿ ಮೇಲೆ ಅನುಮಾನ ಬಂದರೆ ಅರೆಸ್ಟ್ ಮಾಡಿಸುತ್ತೀನಿ ಅಂತೀಯಾ? ಬಾ ಅಖಾಡಕ್ಕೆ ನೋಡೋಣ. ಮುಖ್ಯಮಂತ್ರಿಯವರ ಪಕ್ಕದಲ್ಲೇ ಕುಳಿತಿದ್ದವರ ಮೇಲೆ ಪೊಲೀಸರಿಗೆ ಅನುಮಾನ ಬಂದಿಲ್ಲವೇ? ಸಿಎಂ ಒಬ್ಬರನ್ನು ಟ್ರ್ಯಾಪ್ ಮಾಡಿಸಿದ್ದಾರೆ, ಆದರೆ ಅವರನ್ನು ಬಿಟ್ಟುಬಿಟ್ಟಿದ್ದಾರೆ” ಎಂದು ಸರ್ಕಾರದ ನಡೆಗೆ ತಿರುಗೇಟು ನೀಡಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ ಎಚ್ಡಿಕೆ, “ನನ್ನ ಮಗನ ಪೋಸ್ಟರ್ ಅಂಟಿಸಿದಾಗ ಎಲ್ಲಿ ಹೋಗಿದ್ರಿ ಪ್ರಿಯಾಂಕ್ ಖರ್ಗೆ ಅವರೇ? ಹೆದರಿಸಿ-ಬೆದರಿಸಿ ಆಡಳಿತ ನಡೆಸುತ್ತೇವೆ ಎಂದರೆ ನಾನು ಅದಕ್ಕೂ ರೆಡಿ. ನಿಮ್ಮ ಕಮಿಷನರ್ ಕಚೇರಿಗೆ ಬರ್ತೀನಿ, ಅರೆಸ್ಟ್ ಮಾಡಲಿ” ಎಂದರು.




