ಬೆಳ್ತಂಗಡಿ: ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣ: ಮೂವರು ಆರೋಪಿಗಳ ಬಂಧನ
ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದಲ್ಲಿ ವೈದ್ಯರೊಬ್ಬರು ನಡೆಸುತ್ತಿದ್ದ ಕ್ಲಿನಿಕ್ಗೆ ಬೆಂಕಿ ಹಚ್ಚಿ, ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸುಟ್ಟುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ನಡ ಗ್ರಾಮದ ಡಾ. ಪ್ರದೀಪ ಎ. (51) ಅವರು ನಾವೂರಿನಲ್ಲಿ ನಡೆಸುತ್ತಿದ್ದ ಕ್ಲಿನಿಕ್ಗೆ ಅಕ್ಟೋಬರ್ 6ರಂದು ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಘಟನೆಯಿಂದ ಕ್ಲಿನಿಕ್ನಲ್ಲಿದ್ದ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಅಂದಾಜು ₹2ರಿಂದ ₹3 ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟುಹೋಗಿದ್ದವು.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 112/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 326(f), 326(g) ಮತ್ತು 324(5)ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಬೆಳ್ತಂಗಡಿ ನಾವೂರು ನಿವಾಸಿಗಳಾದ ರವಿ ಕುಮಾರ್ (31), ಸುರೇಶ್ ಪಿ.ಎನ್. (44) ಮತ್ತು ದಿನೇಶ್ ಪ್ರಭು (51) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.






