September 4, 2026

ಪುತ್ತೂರು: ವಿವಿಧ ದೇವಸ್ಥಾನಗಳಲ್ಲಿ ಕಾಣಿಕೆ ಡಬ್ಬಿ ಕಳವು ಪ್ರಕರಣ: ಅಂತಾರಾಜ್ಯ ಕಳ್ಳನ ಬಂಧನ

0
image_editor_output_image1191566856-1788524655545

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಲ್ಲಿ ಕಾಣಿಕೆ ಡಬ್ಬಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಕಳ್ಳನೊಬ್ಬನನ್ನು ಪೊಲೀಸರು ಕೇರಳದ ಬದಿಯಡ್ಕದಲ್ಲಿ ಬಂಧಿಸಿ, ಸುಮಾರು ₹1 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಟ್ಟಂಪಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ, ನಿಡ್ಪಳ್ಳಿ ಶ್ರೀ ಶಾಂತದುರ್ಗ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನಕ್ಕೆ ಯತ್ನ ಹಾಗೂ ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಆದಿಶಕ್ತಿ ದೇವಿ ಸನ್ನಿಧಿಯ ಕಾಣಿಕೆ ಡಬ್ಬಿ ಕಳ್ಳತನಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೇರಳ ರಾಜ್ಯದ ಕಿನ್ನಿಂಗಾರು, ಬದಿಯಡ್ಕ ಹಾಗೂ ಆದೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಕೇರಳದ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಮದಕ ಕಿನ್ನಿಗಾರ ನಿವಾಸಿ ಸತೀಶ್ (31), ತಂದೆ ನಾರಾಯಣ ಎಂಬಾತನನ್ನು ಬದಿಯಡ್ಕದಲ್ಲಿ ಬಂಧಿಸಲಾಗಿದೆ.

ಆರೋಪಿಯಿಂದ ಕಳ್ಳತನಕ್ಕೆ ಸಂಬಂಧಿಸಿದ ಕಾಣಿಕೆ ಡಬ್ಬಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಹೊಂಡಾ ಎಸ್‌ಪಿ ಶೈನ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ₹1 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಸತೀಶ್ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನ ಪ್ರಕರಣವೂ ದಾಖಲಾಗಿದ್ದು, ಅಡಿಕೆ ಕಳ್ಳತನ ಹಾಗೂ ದೇವಸ್ಥಾನಗಳ ಕಾಣಿಕೆ ಡಬ್ಬಿ ಕಳ್ಳತನದಲ್ಲಿ ಭಾಗಿಯಾಗುತ್ತಿದ್ದ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣ್ ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ ಅವರ ಆದೇಶದಂತೆ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಅವರ ನಿರ್ದೇಶನದಲ್ಲಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ಪಿಎಸ್‌ಐಗಳಾದ ಗುಣಪಾಲ ಜೆ. ಹಾಗೂ ಸುಷ್ಮಾ ಜಿ. ಭಂಡಾರಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಹೆಚ್‌ಸಿ ರಮೇಶ್, ಹೆಚ್‌ಸಿ ನಾಗರಾಜ, ಪಿಸಿಗಳಾದ ಮಂಜುನಾಥ, ಆಕಾಶ್, ಕಾರ್ತಿಕ್, ಅಪರಾಧ ವಿಭಾಗದ ಪಿಸಿಗಳಾದ ಶರಣಪ್ಪ ಪಾಟೀಲ್, ಈರಣ್ಣ ಹಾಗೂ ಹೆಚ್‌ಜಿ ಹರಿಪ್ರಸಾದ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಸಹಕರಿಸಿದ್ದರು.

Leave a Reply

Your email address will not be published. Required fields are marked *

error: Content is protected !!