ಮಧ್ಯಪ್ರದೇಶ: ಶಾಸಕನ ಕಾರು ತೊಳೆಯಲು ಅಗ್ನಿಶಾಮಕ ವಾಹನ ಬಳಕೆ: ವೀಡಿಯೊ ವೈರಲ್
ಮಧ್ಯಪ್ರದೇಶ: ಸಿಂಗ್ರೌಲಿಯಲ್ಲಿರುವ ಬಿಜೆಪಿ ಶಾಸಕ ರಾಮ್ ನಿವಾಸ್ ಶಾ ಅವರ ನಿವಾಸದ ಹೊರಗೆ ಅವರ ಕಾರನ್ನು ಅಗ್ನಿಶಾಮಕ ದಳದ ವಾಹನ ಬಳಸಿ ತೊಳೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿಶಾಮಕ ವಾಹನಕ್ಕೆ ಜೋಡಿಸಲಾದ ಪೈಪ್ ಗಳನ್ನು ಬಳಸಿ ಶಾಸಕರ ಇನೋವಾ ಕಾರಿನ ಮೇಲೆ ನೀರು ಚಿಮುಕಿಸುತ್ತಿರುವುದು ಕಂಡು ಬಂದಿದೆ. ವಾಹನವನ್ನು ಬಿಲೋಂಜಿಯಲ್ಲಿರುವ ಶಾ ಅವರ ನಿವಾಸದ ಹೊರಗಿನ ರಸ್ತೆಯಲ್ಲಿ ನಿಲ್ಲಿಸಲಾಗಿತ್ತು.
ಈ ನಡುವೆ, ವೀಡಿಯೊ ನೋಡಿರುವುದಾಗಿ ಶಾ ತಿಳಿಸಿದ್ದಾರೆ. ಅಗ್ನಿಶಾಮಕ ವಾಹನ ನೀರು ತುಂಬಿಸಲು ಮೇಯರ್ ಚೇರ್ಮನ್ ಅವರ ಮನೆಗೆ ಹೋಗಿತ್ತು. ಆಕಸ್ಮಿಕವಾಗಿ ಅಲ್ಲಿ ನಿಂತಿತ್ತು ಎಂದು ಅವರು ಹೇಳಿದ್ದಾರೆ.
”ನಾವು ಕೂಡ ವೀಡಿಯೊ ನೋಡಿದ್ದೇವೆ. ಯಾವುದೇ ಶಾಸಕ ಅಥವಾ ಸಂಸದ ತನ್ನ ಸ್ವಂತ ಕಾರನ್ನು ತೊಳೆಯುವುದಿಲ್ಲ. ಅಗ್ನಿಶಾಮಕ ವಾಹನ ತನ್ನ ನೀರಿನ ಟ್ಯಾಂಕ್ ತುಂಬಿಸಲು ಮೇಯರ್ ಚೇರ್ಮನ್ ಅವರ ಮನೆಗೆ ಹೋಗಿತ್ತು ಎಂದು ಚಾಲಕ ಹೇಳಿದ್ದಾನೆ. ಅದು ಆಕಸ್ಮಿಕವಾಗಿ ಅಲ್ಲಿ ನಿಂತಿತ್ತು. ಆದ್ದರಿಂದ ಆತ ಕಾರಿನ ಮೇಲೆ ಸ್ವಲ್ಪ ನೀರು ಚಿಮುಕಿಸಿದ್ದಾನೆ. ಇವೆಲ್ಲವನ್ನು ಮಾಡಬಾರದು ಎಂದು ನಾನು ಆತನಿಗೆ ಹೇಳಿದ್ದೇನೆ” ಎಂದು ರಾಮ್ ನಿವಾಸ್ ಶಾ ಹೇಳಿದ್ದಾರೆ.





