ದ.ಕ.ಜಿಲ್ಲಾ ಖಾಝಿಯಾಗಿ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್
ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರ ನಿಧನದಿಂದಾಗಿ ತೆರವಾದ ದ.ಕ.ಜಿಲ್ಲಾ ಖಾಝಿ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್ ಅವರನ್ನು ಆಯ್ಕೆ ಮಾಡಿರುವುದಾಗಿ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿ ಇಂದು ಅಧಿಕೃತವಾಗಿ ಘೋಷಿಸಿದೆ.
ಇಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರ ಸಮ್ಮುಖದಲ್ಲಿ ಇತರ ಮಸೀದಿಗಳ ಪ್ರಮುಖರ ಜೊತೆ ಸಮಾಲೋಚನೆ ನಡೆಸಿ ಈದ್ಗಾ ಮತ್ತು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞಿ ಅಧಿಕೃತವಾಗಿ ಘೋಷಿಸಿದರು.
ಅಪಾರ ಪಾಂಡಿತ್ಯವನ್ನು ಹೊಂದಿರುವ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಲಿ ಶಿಹಾಬ್ ತಂಙಳ್ ಪ್ರವಾದಿ ಮುಹಮ್ಮದ್ (ಸ) ಅವರ ಕುಟುಂಬ ಪರಂಪರೆಯ ಯಮನಿ ಸಯ್ಯಿದ್ ವಂಶಸ್ಥರು. ಕಲ್ಲಿಕೋಟೆ ಸಹಿತ ದಕ್ಷಿಣ ಕೇರಳದ ಹಲವು ಮಹಲ್ಲುಗಳ ಖಾಝಿಯಾಗಿರುವ ಅವರು ಪ್ರಸಕ್ತ ತಿರೂರ್ಙಾಡಿ ತಾಲೂಕು ಸಮಸ್ತದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.




